ಶಿವಮೊಗ್ಗ: ದೇಶದ ಯುವಜನರಲ್ಲಿ ದೇಶಾಭಿಮಾನ, ದೇಶಭಕ್ತಿ ಮತ್ತು ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಹಾಗೂ ದೇಶದ ಆಂತರಿಕ ಭದ್ರತೆಗೆ ಶಕ್ತಿ ತುಂಬುವಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ಪ್ರಸಕ್ತ ಸಾಲಿನಿಂದಲೇ ಆರಂಭಗೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ರಾಗಿಗುಡ್ಡದ ಹಳೆಯ ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಗೊಳ್ಳುತ್ತಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ರಕ್ಷಣಾ ಇಲಾಖೆಗೆ ಬಲತುಂಬುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಯುವಜನಾಂಗಕ್ಕೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರ್ಕಾರವು ಅತ್ಯಂತ ಹೆಚ್ಚಿನ ಅನುದಾನವನ್ನು ಖರ್ಚು ಮಾಡುತ್ತಿದೆ ಎಂದವರು ನುಡಿದರು.
ಈ ವಿಶ್ವವಿದ್ಯಾಲಯದ ಆರಂಭದಿಂದಾಗಿ ರಾಜ್ಯದ ಯುವಕರು ವಿಶೇಷ ಮಹತ್ವದ ಪದವಿ ಮತ್ತು ಸ್ನಾತಕೋತ್ತರ ತರಬೇತಿಗಳನ್ನು ಪಡೆಯಲಿದ್ದಾರೆ ಎಂದ ಅವರು, ಹೆಚ್ಚಿನ ಯುವಕರು ರಕ್ಷಣಾ ಘಟಕಗಳಲ್ಲಿ ಉದ್ಯೋಗಾವಕಾಶ ಪಡೆಯಲಿದ್ದಾರೆ ಎಂದವರು ನುಡಿದರು..