ಚಿತ್ರದುರ್ಗ: ಮುರುಘಾಶ್ರೀ ಡಾ.ಶಿವಮೂರ್ತಿ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಬೆನ್ನಲ್ಲೇ ಇದೀಗ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ಹಲವು ಗ್ರಾಮಸ್ಥರು ಶೀಗಳ ವಿರುದ್ಧ ಪ್ರತಿಭಟನೆ ನಡೆಸಿ, ಅವರ ಪ್ರತಿಮೆ ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ದ್ವಾರದಲ್ಲಿ ನಿರ್ಮಿಸಲಾಗಿದ್ದ ಶಿವಮೂರ್ತಿ ಮುರುಘಾ ಶರಣರ ಪ್ರತಿಮೆ ಧಂಸಗೊಳಿಸಿದ ಗ್ರಾಮಸ್ಥರು, ಆಶ್ರಮದ ಒಳಗಿದ್ದ ಫೋಟೋವನ್ನು ಹೊರತಂದು ಶವಯಾತ್ರೆ ಮಾಡಿ ಬಳಿಕ ಸುಟ್ಟು ಹಾಕಿದ್ದಾರೆ.
ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅಧ್ಯಕ್ಷರಾಗಿ ಶಿವಮೂರ್ತಿ ಶರಣರು ಆಶ್ರಮದ ಯಾವುದೇ ಅಭಿವೃದ್ಧಿಕಾರ್ಯ ಮಾಡಿಲ್ಲ, ಆಶ್ರಮಕ್ಕೆ ವಾರ್ಷಿಕವಾಗಿ ಬರುತ್ತಿದ್ದ 9 ಕೋಟಿ ಆದಾಯದ ಹಣವನ್ನೂ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಒಂದು ಕಾಲದಲ್ಲಿ ಶಿಸ್ತಿಗೆ ಅಭಿವೃದ್ಧಿಗೆ ಹೆಸರಾಗಿದ್ದ ಅನಾಥ ಸೇವಾಶ್ರಮ ಇಂದು ದುಸ್ಥಿತಿ ತಲುಪಿದ್ದು, ಆಶ್ರಮದ ಆವರಣದಲ್ಲಿ ದನಕರುಗಳು ಮೇಯುತ್ತಿವೆ. ಆಶ್ರಮದ ಟ್ರಸ್ಟಿಗಳೂ ಇತ್ತ ಸುಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲಾಡಿಹಳ್ಳಿ, ಕೆಂಗುಂಟೆ, ದುಮ್ಮಿ, ರಾಮಘಟ್ಟ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ರೈತ ಮುಖಂಡರು ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಸ್ವಾಮೀಜಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದರೂ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳದ ಬಗ್ಗೆ ಕಿಡಿಕಾರಿದ್ದಾರೆ. ಮಲ್ಲಾಡಿಹಳ್ಳಿ ಆಶ್ರಮದ ದುರಾವಸ್ಥೆ, ಶ್ರೀಗಳ ವಿರುದ್ಧ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ಸ್ವಾಮೀಜಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.