ಬೆಂಗಳೂರು: ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತವುಂಟಾಗಿದ್ದು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಭಾರಿ ಮಳೆಯಿಂದಾಗಿ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಶಿರಾಡಿಘಾಟ್ ನ ದೋಣಿಗಲ್ ಬಳಿ ಭೂಕುಸಿತವುಂಟಾಗಿತ್ತು. ಮುಂಜಾಗೃತಾ ಕ್ರಮವಾಗಿ ಲಘುವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ದೋಣಿಗಲ್ ಬಳಿ ಮತ್ತೆ ಭೂ ಕುಸಿತವುಂಟಾಗಿದ್ದು, ವಾಹನ ಸಂಚಾರಕ್ಕೆ ಆತಂಕ ಎದುರಾಗಿದೆ.
ಕಳೆದ ವರ್ಷ ಇದೆ ಜಾಗದಲ್ಲಿ ಭೂಕುಸಿತವುಂಟಾಗಿ ವಾಹನ ಸಂಚಾರವನ್ನು ಒಂದು ತಿಂಗಳು ನಿಷೇಧಿಸಲಾಗಿತ್ತು. ಇದೀಗ ಪದೇ ಪದೇ ಶಿರಾಡಿಘಾಟ್ ನಲ್ಲಿ ಭೂಕುಸಿತವಾಗುತ್ತಿರುವುದರಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ.