ಬೆಂಗಳೂರು: ಎಸ್.ಎಸ್.ಎಲ್.ಸಿ ಮಕ್ಕಳಿಗೆ ಸೀಮಿತ ವಿಷಯಗಳ ಪರೀಕ್ಷೆ ಎಂಬ ಮೊಂಡುತನವನ್ನು ಸರ್ಕಾರ ಕೈಬಿಡಬೇಕು. ಸರ್ಕಾರದ ಮತಿಹೀನ ನಿರ್ಧಾರಕ್ಕೆ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಪಿಯುಸಿಗೆ ಪರೀಕ್ಷೆ ಇಲ್ಲ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಿತ ವಿಷಯಗಳಿಗೆ ಪರೀಕ್ಷೆ ಎಂಬ ಶಿಕ್ಷಣ ಸಚಿವರ ಘೋಷಣೆ ಬೆನ್ನಲ್ಲೇ ಕಿಡಿಕಾರಿರುವ ಕುಮಾರಸ್ವಾಮಿ, ಇದು ರಾಜ್ಯ ಸರ್ಕಾರದ ಬುದ್ಧಿಭ್ರಮಣೆಯ ನಿರ್ಧಾರ. ಮತಿಗೆಟ್ಟಂತೆ ವರ್ತಿಸುತ್ತಿರುವ ಶಿಕ್ಷಣ ಸಚಿವರ ಐಲುಪೈಲು ನಿರ್ಧಾರ ಕಂಡು ರಾಜ್ಯದ ಜನತೆ ಹಾದಿ ಬೀದಿಯಲ್ಲಿ ನಗಾಡುವಂತಾಗಿದೆ ಎಂದಿದ್ದಾರೆ.
ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುವುದನ್ನು ಬಿಟ್ಟು, ಶಿಕ್ಷಣ ಸಚಿವರು ಎಡಬಿಡಂಗಿ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಮುಖ್ಯಮಂತ್ರಿಗಳು ಕಡಿವಾಣ ಹಾಕಬೇಕು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಮಕ್ಕಳಿಗೆ ಏಕರೂಪ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಬೇಕು. ಪಿಯುಸಿ ಮಕ್ಕಳಿಗೆ ಪರೀಕ್ಷೆ ಇಲ್ಲ ಎಂದಾದರೆ ಅದು ಅವರಿಗಿಂತ ಕಿರಿಯರಾದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೂ ಅನ್ವಯಿಸಬೇಕು ಎಂದು ಆಗ್ರಹಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿದ್ದಕ್ಕೆ ಪ್ರಧಾನಮಂತ್ರಿಯ ‘ಗುಮ್ಮ’ ಕಾರಣ. ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವ ಬೃಹಸ್ಪತಿ ಶಿಕ್ಷಣ ಸಚಿವರೋ? ಪೋಷಕರು, ವಿದ್ಯಾರ್ಥಿಗಳ ತಾಳ್ಮೆ ಕೆಣಕುವ ಪರೀಕ್ಷಾ ಮಂತ್ರಿಯೋ ? ಪರೀಕ್ಷೆಯಲ್ಲಿ ಪಾಸಾಗುವ ಏಳೆಂಟು ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನಾಯಸವಾಗಿ ಸೀಟು ದಕ್ಕಿಸಿಕೊಳ್ಳಲು ವ್ಯವಸ್ಥೆ ಮಾಡುವ ಕಡೆ ಚಿತ್ತ ಹರಿಸಲಿ ಎಂದು ಗುಡುಗಿದ್ದಾರೆ.