ಬೆಂಗಳೂರು’; ಶಾಲೆಗಳಿಗೆ ಕೇಸರಿ ಬಣ್ಣ ಹಚ್ಚುವ ವಿಚಾರವಾಗಿ ಕಾಂಗ್ರೆಸ್ ಶಿಕ್ಷಣದಲ್ಲಿಯೂ ರಾಜಕೀಯ ಮಾಡಲು ಹೊರಟಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಸೂರ್ಯನೂ ಕೇಸರಿ ಬಣ್ಣದಲ್ಲಿದ್ದಾನೆ. ಹಾಗಂತ ಸೂರ್ಯನನ್ನು ವಿರೋಧಿಸಲು ಆಗುತ್ತಾ? ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಮಾಡಲು ಸಾಧ್ಯವಾಗದ್ದನ್ನು ನಾವಿಂದು ಸಾಧಿಸಿದ್ದೇವೆ. ನಾವು ಶಾಲೆಗಳಿಗೆ ಯಾವ ಬಣ್ಣ ಹಚ್ಚಬೇಕು ಅಂತಾ ಇನ್ನೂ ತೀರ್ಮಾನಿಸಿಲ್ಲ. ಆರ್ಟಿಕಲ್ಚರ್ ನವರು ಯಾವ ಬಣ್ಣ ಹೇಳ್ತಾರೋ ಅದನ್ನು ಹೊಡೆಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ವಿರೋಧ ಮಾಡುತ್ತೆ ಎಂದು ನಾವು ಕೇಸರಿ ಬಣ್ಣ ಬಳಿಯದೇ ಇರುವುದಿಲ್ಲ. ಕಾಂಗ್ರೆಸ್ ಧ್ಯಾನವನ್ನು ವಿರೋಧಿಸುತ್ತೆ ಎಂದು ಧ್ಯಾನವನ್ನೇ ನಿಲ್ಲಿಸಲು ಆಗಲ್ಲ. ಶಿಕ್ಷಣ ಕ್ಷೇತ್ರದಲ್ಲೂ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ವಿವೇಕ ಯೋಜನೆಯಡಿ ಪ್ರತಿ ಕೊಠಡಿಯ ಹೊರಗಡೆ ವಿವೇಕಾನಂದರ ಭಾವಚಿತ್ರ ಮುದ್ರಣ ಮಾಡಲಾಗುವುದು. ವಿವೇಕಾನಂದರು ಜ್ಞಾನದ ಸಂಕೇತ. ಅವರ ಜೀವನ ಮಾರ್ಗದರ್ಶನವನ್ನು ಮಕ್ಕಳು ಕಲಿಯಬೇಕು. ಹೀಗಾಗಿ ಅವರ ಫೋಟೋ ಮುದ್ರಿಸುವುದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.