
ಮಂಡ್ಯ: ಅರಣ್ಯ ಸಿಬ್ಬಂದಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಜೆಡಿಸ್ ಶಾಸಕ ಸುರೇಶ್ ಗೌಡ ಸೇರಿದಂತೆ 10 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ನಾಗಮಂಗಲದ ಹಾಲ್ತಿ ಪ್ರದೇಶದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ಮುಂದಾಗಿದ್ದ ಅರಣ್ಯ ಅಧಿಕಾರಿಗಳಿಗೆ ಶಾಸಕರು ಹಾಗೂ ಅವರ ಬೆಂಬಲಿಗರು ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ವಲಯ ಅರಣ್ಯಾಧಿಕಾರಿ ಸತೀಶ ಬಿ ಎಂಬುವವರು ಶಾಸಕ ಸುರೇಶ್ ಗೌಡ ಹಾಗೂ ಬೆಂಬಲಿಗರ ವಿರುದ್ಧ ದೂರು ನೀಡಿದ್ದರು.
ಪೊಲೀಸ್ ಸಿಬ್ಬಂದಿಗಳ ಎದುರೇ ಶಾಸಕರು ಹಾಗೂ ಬೆಂಬಲಿಗರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ಅರಣ್ಯಾಧಿಕಾರಿಗಳು ಆರೋಪಿಸಿದ್ದಾರೆ. ನಾಗಮಂಗಲ ಗ್ರಾಮೀಣ ಠಾಣೆಯಲ್ಲಿ ಶಾಸಕ ಸುರೇಶ್ ಗೌಡ, ಪ್ರವೀಣ್ ಚಂದ್ರೇಗೌಡ, ರಾಜು ಬೋರೇಗೌಡ, ಹರೀಶ್ ಜಯರಾಜು, ವೆಂಕಟಪ್ಪ ಸೇರಿದಂತೆ 10 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.