ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಟಿಕೆಟ್ ವಿಚಾರವಾಗಿ ಹೇಳಿಕೆ ನೀಡಿದ್ದ ಶಾಸಕ ಸಾ.ರಾ.ಮಹೇಶ್ ವಿರುದ್ಧ ಕಿಡಿ ಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ತರಾಟೆಗೆ ತೆಗೆದುಕೊಂಡಿದ್ದಾರೆ.
ಪರಿಷತ್ ಚುನಾವಣೆಗೆ ಜಿ.ಟಿ.ದೇವೇಗೌಡ ಕುಟುಂಬಕ್ಕೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಇದೆ. ಜಿಟಿಡಿ ಇನ್ನೂ ಜೆಡಿಎಸ್ ನಲ್ಲಿಯೇ ಇದ್ದಾರೆ. ಹಾಗಾಗಿ ಅವರ ಮುಂದಾಳತ್ವದಲ್ಲೇ ಪರಿಷತ್ ಚುನಾವಣೆ ನಡೆಸುವ ಉದ್ದೇಶವಿದ್ದು, ಜಿಟಿಡಿ ಪತ್ನಿಯವರನ್ನು ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದೆ ಎಂದು ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದರು.
ಈ ವಿಚಾರವಾಗಿ ಕೆಂಡಾಮಂಡಲರಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸಾ.ರಾ.ಮಹೇಶ್ ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಈ ರೀತಿ ಹೇಳುವಂತೆ ಸೂಚಿಸಿದ್ದು ಯಾರು..? ನನ್ನ ಗಮನಕ್ಕೂ ತರದೇ ಇಂಥಹ ಹೇಳಿಕೆ ನೀಡುವ ಅಗತ್ಯವೇನಿತ್ತು…? ಎಂದು ಪ್ರಶ್ನಿಸಿದ್ದಾರೆ.
ಹೆಚ್.ಡಿ.ಕೆ. ಕೋಪಕ್ಕೆ ಕಂಗಾಲಾದ ಸಾ.ರಾ.ಮಹೇಶ್, ಜೆಡಿಎಸ್ ತೊರೆಯಲು ಮುಂದಾಗಿರುವ ಜಿ.ಟಿ.ದೇವೇಗೌಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂಬ ಕಾರಣಕ್ಕೆ ಹೇಳಿದ್ದಾಗಿ ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಗರಂ ಆಗಿರುವ ಕುಮಾರಸ್ವಾಮಿ, ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.