
ಬೆಳಗಾವಿ: ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.
ಶಾಸಕ ರಾಜು ಕಾಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು, ರಾಜು ಕಾಗೆ ಮನೆ ಬಳಿ ಆತ್ಮಹತ್ಯೆಗೆ ಮುಂದಾಗಿದ್ದು, ಸಧ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರಗುಪ್ಪಿ ಗ್ರಾಮ ಪಂಚಾಯತ್ ಸದಸ್ಯ ರಾಮನಗೌಡ ಪಾಟೀಲ್, ಕುಟುಂಬ ಸಮೇತವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಕಚೇರಿಯಿಂದಲೇ ಶಾಸಕರಿಗೆ ಕರೆ ಮಾಡಿ, ಹೆಂಡತಿ, ಮಕ್ಕಳ ಸಮೇತವಾಗಿ ಬಂದು ನಿಮ್ಮ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಅಲ್ಲದೇ ಊರಿಗೆ ಮೈಕ್ ಅಳವಡಿಸಿ ಇಡೀ ಊರ ಜನರಿಗೆ ಕೇಳುವಂತೆ ಮೈಕ್ ನಲ್ಲಿ ಅನೌನ್ಸ್ ಮಾಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯತ್ ಸದಸ್ಯ ರಾಮನಗೌಡ ಮನೆಗೆ ಆಗಮಿಸಿದ ಅಥಣಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.