ಬೆಂಗಳೂರು: ದಾವಣಗೆರೆ ಜಿಲ್ಲೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಮತ್ತಿತರರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಶಾಸಕರಿಗೆ ಬಂಧನ ಭೀತಿ ಎದುರಾಗಿದೆ.
ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ಪ್ರಕರಣ ಸಂಬಂಧ ಇದೀಗ ಶಾಸಕರಿಗೂ ಸಮಸ್ಯೆ ಎದುರಾಗಿದೆ. ಶ್ರೇಯಸ್ ಕಶ್ಯಪ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮತ್ತಿತರರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮಾಡಾಳ್ ವಿರೂಪಾಕ್ಷಪ್ಪ ಎ 1 ಆರೋಪಿ, ಪ್ರಶಾಂತ್ ಎ2 ಆರೋಪಿ, ಕೆ ಎಸ್ ಡಿ ಎಲ್ ಅಕೌಂಟೆಂಟ್ ಸುರೇಂದ್ರ ಎ3, ಮಾಡಾಳ್ ಪ್ರಶಾಂತ್ ಸಂಬಂಧಿ ಸಿದ್ದೇಶ್ ಎ4, ಅರೋಮಾ ಕಂಪನಿ ಸಿಬ್ಬಂದಿ ಆಲ್ಬರ್ಟ್ ನಿಕೋಲಾ ಎ5 ಹಾಗೂ ಅರೋಮಾ ಕಂಪನಿ ಸಿಬ್ಬಂದಿ ಗಂಗಾಧರ ಎ6 ಆರೋಪಿಯಾಗಿದ್ದಾರೆ.
ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.