ತುಮಕೂರು: ಜೆಡಿಎಸ್ ನಿಂದ ಉಚ್ಛಾಟನೆಗೊಂಡಿರುವ ಶಾಸಕ ಎಸ್.ಆರ್. ಶ್ರೀನಿವಾಸ್ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ವಾಕ್ಸಮರ ಸಾಮಾಜಿಕ ಜಾಲತಾಣಗಳಲ್ಲಿ ತಾರಕಕ್ಕೇರಿದ್ದು, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಉಭಯ ಬೆಂಬಲಿಗರ ನಡುವೆ ಪರಸ್ಪರ ನಿಂದನೆ ಸಂಬಂಧ 10 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಎಸ್.ಆರ್. ಶ್ರೀನಿವಾಸ್ ಅವರ ಮೂವರು ಬೆಂಬಲಿಗರು ಹಾಗೂ ಜೆಡಿಎಸ್ ನ 7 ಜನರು ಸೇರಿದಂತೆ 10 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಜೆಡಿಎಸ್ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ್ದರು. ಈ ಬೆಳವಣಿಗೆ ಬಳಿಕ ಎಸ್.ಆರ್. ಶ್ರೀನಿವಾಸ್ ಅವರನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡಲಾಗಿತ್ತು.
ಎಸ್. ಆರ್. ಶ್ರೀನಿವಾಸ್ ಅವರ ತಿಥಿ ಕಾರ್ಡ್ ಮಾಡಿ ಜೆಡಿಎಸ್ ನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಜೂನ್ 21ರಂದು ಗುಬ್ಬಿಯಲ್ಲಿ ಕೈಲಾಸ ಸಮಾರಾಧನೆ ಎಂದು ಪೋಸ್ಟ್ ಮಾಡಲಾಗಿತ್ತು.
ಇದರ ವಿರುದ್ಧ ಎಸ್.ಆರ್. ಶ್ರೀನಿವಾಸ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಎಸ್.ಆರ್. ಶ್ರೀನಿವಾಸ್ ಹಾಗೂ ಜೆಡಿಎಸ್ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿದೆ.