ಬೆಂಗಳೂರು: ಶಾಸಕ ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದ್ದು, ಓರ್ವ ಅರ್ಚಕರಿಂದ ಬೆಲ್ಲದ್ ಅವರಿಗೆ ಕಾನ್ಫರೆನ್ಸ್ ಕಾಲ್ ಬಂದಿರುವ ವಿಚಾರ ಬಹಿರಂಗವಾಗಿದೆ.
ಫೋನ್ ಟ್ಯಾಪಿಂಗ್ ಬಗ್ಗೆ ಬೆಲ್ಲದ್ ನೀಡಿದ್ದ ನಂಬರ್ ಬೆನ್ನು ಹತ್ತಿದ ಪೊಲೀಸರಿಗೆ ಅದು ಹೈದರಾಬಾದ್ ನಿಂದ ಬಂದ ಕರೆಯಾಗಿದ್ದು, ಓರ್ವ ಅರ್ಚಕರು ಕಾನ್ಫರೆನ್ಸ್ ಕಾಲ್ ಮೂಲಕ ಕರೆ ಮಾಡಿದ್ದಾರೆ. ಅದು ಕೂಡ ಆರ್ ಎಸ್ ಎಸ್ ಮುಖಂಡರ ನಿವಾಸದಿಂದ ಬಂದ ಕರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪರಿಶೀಲನೆ ನಡೆಸಲು ಹೈದರಾಬಾದ್ ನ ಮುಶಿರಾಬಾದ್ ನಲ್ಲಿರುವ ಜಿತೇಂದ್ರ ಪ್ರಖ್ಯಾತ್ ಎಂಬುವವರ ನಿವಾಸಕ್ಕೆ ತೆರಳಿದ ಪೊಲೀಸರಿಗೆ ಶಾಸಕ ಅರವಿಂದ್ ಬೆಲ್ಲದ್ ಕರೆ ಮಾಡಿ ವಾಪಸ್ ಬರುವಂತೆ ಸೂಚಿಸಿದ್ದಾರೆ. ಇದೇ ವೇಳೆ ಮಾಜಿ ಸಚಿವ ರಾಮದಾಸ್ ಕೂಡ ಕರೆ ಮಾಡಿ ಜಿತೇಂದ್ರ ಪ್ರಖ್ಯಾತ್ ನಿವಾಸದಿಂದ ಹೊರ ಬರುವಂತೆ ಹೇಳಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡರಿಂದಲೂ ಪೊಲೀಸರಿಗೆ ಕರೆ ಹೋಗಿದೆ ಎನ್ನಲಾಗಿದೆ. ಇನ್ನು ಜಿತೇಂದ್ರ ಪ್ರಖ್ಯಾತ್ ಹಲವು ರಾಜಕೀಯ ಮುಖಂಡರಿಗೆ ಪೂಜೆ-ಹೋಮ-ಹವನಗಳನ್ನು ಮಾಡಿಸಿಕೊಟ್ಟವರು ಎಂದು ತಿಳಿದು ಬಂದಿದೆ.
ಈ ನಡುವೆ ಪೊಲೀನ್ ಕದ್ದಾಲಿಕೆ ಪ್ರಕರಣ ಸಂಬಂಧ ಪೊಲೀಸರು ಬೆಲ್ಲದ್ ಅವರಿಗೆ ಮತ್ತೊಂದು ನೋಟೀಸ್ ನೀಡಲು ಮುಂದಾಗಿದ್ದಾರೆ.