ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರ ಟ್ವಿಟರ್ ಖಾತೆಗಳನ್ನು ಕಿಡಿಗೇಡಿಗಳು ಹ್ಯಾಕ್ ಮಾಡುತ್ತಿದ್ದಾರೆ. ಇದೀಗ ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಈ ಕುರಿತು ಬೆಳಗಾವಿ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾಗಿ ಶಾಸಕಿ ತಿಳಿಸಿದ್ದಾರೆ.
ನಿನ್ನೆಯಷ್ಟೇ ಶಾಸಕ ಪ್ರಿಯಾಂಕ್ ಖರ್ಗೆ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಈ ಬಗ್ಗೆ ಸ್ವತ: ಶಾಸಕ ಖರ್ಗೆ ಸುದ್ದಿಗೋಷ್ಠಿ ವೇಳೆ ಮಾಹಿತಿ ನೀಡಿದ್ದರು. ಅಲ್ಲದೇ ತಮ್ಮ ಖಾತೆಯಿಂದ ಯಾವುದೇ ಅನಗತ್ಯ ಪೋಸ್ಟ್ ಬಂದರೆ ಅದು ನನ್ನದಾಗಿರುವುದಿಲ್ಲ ಎಂದು ತಿಳಿಸಿದ್ದರು. ಇದೀಗ ಶಾಸಕಿ ಅಂಜಲಿ ಅವರ ಟ್ವಿಟರ್ ಖಾತೆ ಕೂಡ ಹ್ಯಾಕ್ ಆಗಿದೆ ಎಂದು ತಿಳಿದುಬಂದಿದೆ.