ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಶಾಸಕರೇ ಸಚಿವರುಗಳ ವಿರುದ್ಧ ದೂರು ನೀಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಸಚಿವರ ವಿರುದ್ಧ ಶಾಸಕರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ದೂರು ನೀಡಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಎಂಎಲ್ ಸಿ ರವಿಕುಮಾರ್, ಸಿಎಂ ಸಿದ್ದರಾಮಯ್ಯನವರಿಗೆ 20 ಶಾಸಕರು ದೂರು ಕೊಟ್ಟಿದ್ದಾರೆ. ಶಾಸಕರಾಗಿರುವ ನಮ್ಮ ಸ್ಥಿತಿಯೇ ಹೀಗಾದರೆ ಇನ್ನು ಜನರ ಸ್ಥಿತಿ ಹೇಗೆ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆಯಾಗಿ 2 ತಿಂಗಳೂ ಆಗಿಲ್ಲ, ಆಗಲೇ ಅಸಮಾಧಾನ ಸ್ಫೋಟಗೊಂಡಿದೆ ಎಂದು ಕಿಡಿಕಾರಿದ್ದಾರೆ.
ಶಾಸಕರಾದ ಕೃಷ್ಣಪ್ಪ, ರಾಯರೆಡ್ಡಿ ಅಂತವರೇ ಸಚಿವರುಗಳ ಬಗ್ಗೆ ಪತ್ರ ಬರೆದು ದೂರು ನೀಡಿದ್ದಾರೆ ಎಂದರೆ ಇನ್ನು ಸಚಿವರುಗಳ ಬಗ್ಗೆ ಜನ ಸಾಮಾನ್ಯರು ಎಷ್ಟು ಬೇಸರಗೊಂಡಿರಬೇಕು? ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯೊಳಗೆ ಮುಳುಗಿ ಹೋಗಿದೆ. ಜನ ಒಂದೆಡೆ ಮಳೆಯಿಂದಾಗಿ ತತ್ತರಿಸಿದ್ದಾರೆ. ಇವರ ಗ್ಯಾರಂಟಿ ಯೋಜನೆ ಹೊರತುಪಡಿಸಿ ಮೊದಲು ರೈತರ ಸಂಕಷ್ಟ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸಲಿ ಎಂದು ಹೇಳಿದರು.
ಸಿಂಗಾಪುರದಲ್ಲಿ ಕುಳಿತು ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಬೀಳಿಸುವ ತಂತ್ರ ಹೆಣೆಯುತ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಳಿಕೆಗೆ, ಬಿಜೆಪಿ ಇದರ ಯಾವ ಗೋಜಿಗೂ ಹೋಗಿಲ್ಲ. ರಾಜ್ಯದಲ್ಲಿ ಮಳೆಯಿಂದಾಗಿ ಅನೇಕ ಸಮಸ್ಯೆಗಳಾಗುತ್ತಿವೆ. ಇದರ ಬಗ್ಗೆ ನಮ್ಮ ಗಮನ ಇದೆ ಎಂದರು.