ಚಿಕ್ಕಮಗಳೂರು: ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಗ್ರಾಮಸ್ಥರು ಮಹಿಳೆಯ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಸಂಜೆ ವೇಳೆ ಗ್ರಾಮಕ್ಕೆ ಆಗಮಿಸಿದ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಶಾಸಕರನ್ನು ಹಿಡಿದು ಥಳಿಸಿ ಬಟ್ಟೆ ಹರಿದು ಹಾಕಿ ಕಿಡಿಕಾರಿದ್ದರು.
ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಗ್ರಾಮಸ್ಥರು ಹೈರಾಣಾಗಿದ್ದು, ಈಗಾಗಲೇ ಹಲವು ಜೀವಗಳು ಬಲಿಯಾಗಿವೆ. ಆದಾಗ್ಯೂ ಜನಪ್ರತಿನಿಧಿಗಳು, ಅರಣ್ಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ ಮೆರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಕಾಡಾನೆ ದಾಳಿಗೆ ಮಹಿಳೆ ಸಾವನ್ನಪ್ಪಿದ್ದರೂ ಗ್ರಾಮಸ್ಥರು ಮುಂಜಾನೆಯಿಂದ ಪ್ರತಿಭಟನೆ ನಡೆಸಿದ್ದರೂ ಶಾಸಕರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸದೇ ಸಂಜೆ ವೇಳೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಶಾಸಕರನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ಇದೀಗ ಪ್ರಕರಣ ಸಂಬಂಧ 10 ಜನ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನೊಂದೆಡೆ ಮೃತ ಮಹಿಳೆ ಅಂತ್ಯಸಂಸ್ಕಾರ ಕೂಡ ಇನ್ನೂ ನಡೆದಿಲ್ಲ. ಈ ನಡುವೆ ಗ್ರಾಮಸ್ಥರನ್ನು ಬಂಧಿಸಿರುವುದು ಪ್ರತಿಭಟನೆ ಇನ್ನಶ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.