ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಚುರುಕುಗೊಳಿಸಿದೆ. ಒತ್ತುವರಿ ತೆರವು ತಡೆಯುವಂತೆ ಹಲವೆಡೆ ಜನಪ್ರತಿನಿಧಿಗಳಿಂದಲೇ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಯುವ ನಾಯಕ ನಲಪಾಡ್ ಅಕಾಡೆಮಿಯಿಂದಲೂ ಒತ್ತುವರಿ ನಡೆದಿದ್ದು, ನಲಪಾಡ್ ಅಕಾಡೆಮಿಯ ಕಾಂಪೌಂಡ್ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗುತ್ತಿದ್ದಂತೆ ಶಾಸಕ ಹ್ಯಾರಿಸ್ ಪಿಎ ರಮೇಶ್ ಎಂಬುವವರು ಅಧಿಕಾರಿಗಳಿಗೆ ಅವಾಜ್ ಹಾಕಿ ಬೆದರಿಕೆಯೊಡ್ಡಿದ್ದಾರೆ.
ಶಾಸಕರ ಜಾಗ ಎಂಬುದು ಗೊತ್ತಿದ್ದೂ ಏಕಾಏಕಿ ಸ್ಥಳಕ್ಕೆ ಬಂದು ಜೆಸಿಬಿ ಮೂಲಕ ಕಟ್ಟಡ ತೆರವು ಮಾಡಲು ಎಷ್ಟು ಧೈರ್ಯ? ನೋಟೀಸ್ ನೀಡದೆಯೇ ಏಕಾಏಕಿ ಹೇಗೆ ತೆರವು ಮಾಡುತ್ತಿರೀ? ಮೊದಲು ನೋಟೀಸ್ ನೀಡಿ. ನಂತರ ದಾಖಲೆ ಪರಿಶೀಲನೆ ನಡೆಸಿ. ಒತ್ತುವರಿಯಾಗಿದ್ದರೆ ತೆರವು ಮಾಡಿ. ಅದನ್ನು ಬಿಟ್ಟು ಈ ರೀತಿ ಒಮ್ಮೆಲೆ ಕಟ್ಟಡಗಳನ್ನು ತೆರವು ಮಾಡುತ್ತಿರುವುದು ಸರಿಯಲ್ಲ ಎಂದು ಆವಾಜ್ ಹಾಕಿದ್ದಾರೆ.
ನಲಪಾಡ್ ಅಕಾಡೆಮಿ ಜಾಗದಲ್ಲಿ 2.4ಮೀಟರ್ ಅಗಲ 10 ಮೀಟರ್ ಉದ್ದ ರಾಜಕಾಲುವೆ ಒತ್ತುವರಿಯಾಗಿದೆ. ಕಂದಾಯ ಇಲಾಖೆ ದಾಖಲೆ ಪ್ರಕಾರ ಅಲ್ಲಿ ಕಾಲುವೆ ಇತ್ತು. ಈ ಬಗ್ಗೆ ಅವರಿಗೆ ಮಾಹಿತಿ ಕೊಟ್ಟಿದ್ದೆವು. ಆದರೆ ನಾವು ಒತ್ತುವರಿ ಮಾಡಿಲ್ಲ ದಾಖಲೆ ಇದೆ. ದಾಖಲೆಗಳನ್ನು ಕೊಡುತ್ತೇವೆ ಎಂದು ನಲಪಾಡ್ ಹೇಳುತ್ತಿದ್ದಾರೆ. ಈವರೆಗೂ ದಾಖಲೆಗಳನ್ನು ಕೊಟ್ಟಿಲ್ಲ. ಹಾಗಾಗಿ ಅವರಿಗಾಗಿ ಕಾಯಲು ಆಗುವುದಿಲ್ಲ. ಸಂಜೆ ವೇಳೆಗೆ ಒತ್ತುವರಿ ತೆರವು ಮುಗಿಸುತ್ತೇವೆ ಎಂದು ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ಮಾಲತಿ ತಿಳಿಸಿದ್ದಾರೆ.