ಬೆಂಗಳೂರು: ವಿಧಾನಮಂಡಲ ಅಧಿವೇಶನ ಆರಂಭವಾದಾಗಿನಿಂದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದ್ದು, ಸುಗಮ ಕಲಾಪಕ್ಕೂ ಅಡ್ಡಿಪಡಿಸುತ್ತಿರುವ ಈ ಸಂದರ್ಭದಲ್ಲೇ ಶಾಸಕರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಸೇರಿದಂತೆ ವಿಧಾನಮಂಡಲದ ಎಲ್ಲ ಸದಸ್ಯರ ವೇತನ ಹೆಚ್ಚಳ ವಿಧೇಯಕ ಮಂಡನೆಯಾಗಿದೆ.
ವಿಧಾನಸಭೆಯಲ್ಲಿ ಸಚಿವ ಜೆ.ಸಿ ಮಾಧುಸ್ವಾಮಿ, ವಿಧಾನಮಂಡಲದವರ ಸಂಬಳ, ಭತ್ಯೆ ತಿದ್ದುಪಡಿ ವಿಧೇಯಕ ಮಂಡಿಸಿದ್ದಾರೆ. 2015ರಿಂದ ಶಾಸಕರ ಸಂಬಳ ಹೆಚ್ಚಿಸಿರಲಿಲ್ಲ ಹೀಗಾಗಿ ಈ ಬಾರಿ ಸಂಬಳ ಹೆಚ್ಚಳ ವಿಧೇಯಕ ರೂಪಿಸಲಾಗಿದ್ದು, ಇನ್ಮುಂದೆ ಪ್ರತಿ 5 ವರ್ಷಕೊಮ್ಮೆ ಸಂಬಳ ಹೆಚ್ಚಾಗಲಿದೆ ಎಂದು ತಿಳಿಸಿದರು.
ಈ ವಿಧೇಯಕದಲ್ಲಿ ಶಾಸಕರು, ಮಂತ್ರಿಗಳು, ಆತಿಥ್ಯ ಭತ್ಯೆ, ಮಂತ್ರಿಗಳ ಮನೆ ಬಾಡಿಗೆ, ಮನೆ ನಿರ್ವಹಣೆ ವೆಚ್ಚ, ವಾಹನ ಸೌಲಭ್ಯ, ಪ್ರಯಾಣ ಭತ್ಯೆ ಸೇರಿದಂತೆ ಹಲವು ಸೌಲಭ್ಯಗಳು ಒಳಗೊಂಡಿವೆ.
ಮುಖ್ಯಮಂತ್ರಿಗಳ ಸಂಬಳ ಶೇ.50ರಷ್ಟು ಹೆಚ್ಚಳವಾಗಿದ್ದು, ಪ್ರತಿ ತಿಂಗಳು ಇದ್ದ 50 ಸಾವಿರದಿಂದ 75 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳ 40 ಸಾವಿರ ಇದ್ದ ಸಂಬಳ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಭಾಧ್ಯಕ್ಷರ ಸಂಬಳ 50 ಸಾವಿರದಿಂದ 75 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಶಾಸಕರ ಸಂಬಳ 20 ಸಾವಿರದಿಂದ 40 ಸಾವಿರದವರೆಗೆ ಹೆಚ್ಚಿಸಲಾಗಿದ್ದು, ಮನೆ ಬಾಡಿಗೆ, ಇಂಧನ ವೆಚ್ಚ, ಪ್ರಯಾಣ ಭತ್ಯೆ, ಆತಿಥ್ಯ ವೇತನ ಸೇರಿದಂತೆ ಹಲವು ಸೌಲಭ್ಯಗಳಿಗೆ ಪ್ರತ್ಯೇಕವಾಗಿ ವೇತನ ಹೆಚ್ಚಿಸಲಾಗಿದೆ.