ಮಂಡ್ಯ: ಸದ್ಯಕ್ಕೆ ಸಂಸದೆಯಾಗಿದ್ದರೂ ಶಾಸಕರು ಮಾಡಬೇಕಾದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಶಾಸಕರಿಗೆ ಟಾಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಎಲ್ಲೇ ಹೋದರು ಜನ ಸಾಕಷ್ಟು ಸಮಸ್ಯೆಗಳನ್ನು, ದೂರುಗಳನ್ನು ಹೇಳುತ್ತಾರೆ. ಸಂಸದೆಯಾಗಿ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಶಾಸಕರು ಮಾಡಬೇಕಾದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ. ನಾನು ಮಾಡಿದ ಕೆಲಸಕ್ಕೆ ಅವರುಗಳು ಕ್ರೆಡಿಟ್ ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ ಎಂದು ಕಿಡಿಕಾರಿದರು.
ಶಿಂಷಾ ನದಿಗೆ ಸೇತುವೆ ನಿರ್ಮಾಣ ವಿಚಾರವಾಗಿ ಸಂಸದೆಯಾಗಿ ನಾನು ಕೆಲಸ ಮಾಡಿದ್ದೇನೆ. ದೇವೇಗೌಡರು, ಪ್ರತಾಪ್ ಸಿಂಹ ಪ್ರಯತ್ನ ಪಟ್ಟಿಲ್ಲ ಎಂದು ಹೇಳುವುದಿಲ್ಲ. ನಾನು ನಿತಿನ್ ಗಡ್ಕರಿ ಅವರನ್ನು ಎಷ್ಟು ಭಾರಿ ಭೇಟಿಯಾಗಿದ್ದೇನೆ ಎಂಬುದನ್ನು ಅವರ ಸಚಿವಾಲಯದಿಂದ ತಿಳಿದುಕೊಳ್ಳಬಹುದು. ನನ್ನ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕೇಳಿದಾಗ ಗಡ್ಕರಿ ಅವರು ಸ್ಪಂದಿಸಿದ್ದಾರೆ. ಈಗ ಸಂಸದರ ಕೆಲಸಕ್ಕೂ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಶಾಸಕರು ಕೆಲಸ ಮಾಡಿದ್ದರೆ ಜನರು ನನ್ನ ಯಾಕೆ ಕೇಳುತ್ತಾರೆ ? ಜನರ ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಜನ ಎಚ್ಚೆತ್ತುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ರಾಜಕಾರಣಕ್ಕೆ ಸುಮಲತಾ ಬರುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಸಂಸದರು, ರಾಜ್ಯ ರಾಜಕಾರಣಕ್ಕೆ ಬಂದು ಮಾಡಬೇಕು ಎಂಬುದಿಲ್ಲ. ಸಧ್ಯಕ್ಕೆ ಎಂಪಿಯಾಗಿದ್ದರೂ ಶಾಸಕರ ಕೆಲಸಗಳನ್ನು ಹೊತ್ತುಕೊಂಡು ಮಾಡುತ್ತಿದ್ದೇನೆ. ಮಂಡ್ಯ ಜಿಲ್ಲೆ ಅಭಿವೃದ್ಧಿ ಬಗ್ಗೆ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಇನ್ನು ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಬಜೆಟ್ ನಲ್ಲಿ 50 ಕೋಟಿ ಅನುದಾನ ಬಿಡುಗಡೆ ವಿಚಾರವಾಗಿ ಮೂರು ವರ್ಷಗಳ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ಹೇಳಿದರು.