ತುಮಕೂರು: ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಶಾಸಕ ಗೌರಿಶಂಕರ್ ಅವರಿಗೆ ವಿದೇಶ ಪ್ರವಾಸ ಮಾಡಲು ಸಮಯವಿದೆ. ಆದರೆ ಅಸೆಂಬ್ಲಿಗೆ ಹೋಗಲು ಸಮಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಸಕರಿಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಪ್ರವಾಸ, ಮೋಜು ಮಸ್ತಿ ಮಾಡಲು ಬೇಕಾದಷ್ಟು ಸಮಯಗಳಿವೆ. ಆದರೆ ಅಸೆಂಬ್ಲಿಗೆ ಹೋಗಲು ಸಮಯವಿಲ್ಲ. ಅಧಿವೇಶನ ನಡೆಯುವ ವೇಳೆ ಗೋವಾದಲ್ಲಿ ಇರುತ್ತಾರೆ. ಇಲ್ಲದಿದ್ದರೆ ಥೈಲ್ಯಾಂಡ್ ಗೆ, ದುಬೈಗೆ ತೆರಳಿರುತ್ತಾರೆ. ಶಾಸಕರಾಗಿ ನಾಲ್ಕು ವರ್ಷಗಳಾಗಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಬಿಟ್ಟು ಕಾಲಹರಣ ಮಾಡುತ್ತಿದ್ದಾರೆ ಎಂದು ಸುರೇಶ್ ಗೌಡ ಕಿಡಿಕಾರಿದ್ದಾರೆ.
ನನ್ನನ್ನು ಕೆಲಸ ಮಾಡಿಲ್ಲ ಎಂದು ಸೋಲಿಸಿಲ್ಲ. ರಾಜಕಾರಣದಲ್ಲಿ ಸೋಲು ಗೆಲುವು ಅನಿರೀಕ್ಷಿತ. ಕುತಂತ್ರದಿಂದ ನನ್ನ ಸೋಲಿಸಿದ್ದಾರೆ. ವಂಚನೆ, ಮೋಸ ಮಾಡಿ ಶಾಸಕರು ನಕಲಿ ಬಾಂಡ್ ಹಂಚಿ ಗೆದ್ದಿದ್ದಾರೆ. ಈ ಮಣ್ಣಲ್ಲಿ ನ್ಯಾಯ ಎಂಬುದು ಇದ್ದರೆ ಮೋಸಕ್ಕೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.