ಬೆಂಗಳೂರು: ಶಾಲೆಗಳಲ್ಲಿ ಹಿಜಾಬ್ ನಿಂದ ಆರಂಭವಾದ ವಿವಾದ ಇದೀಗ ಸಾವರ್ಕರ್ ವರ್ಸಸ್ ಟಿಪ್ಪು ಭಾವಚಿತ್ರದವರೆಗೂ ಬಂದು ನಿಂತಿದೆ. ಶಾಲೆಗಳಲ್ಲಿ ಸಾವರ್ಕರ್ ಫೋಟೋ ಅಳವಡಿಸುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿರುವ ಬೆನ್ನಲ್ಲೇ ಮುಸ್ಲಿಂ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುವುದಾದರೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲವೇ? ಟಿಪ್ಪು ಭಾವಚಿತ್ರಗಳನ್ನು ಶಾಲೆಗಳಲ್ಲಿ ಅಳವಡಿಸಬೇಕು ಎಂದು ಮುಸ್ಲಿಂ ಸಂಘಟನೆಗಳು ಪಟ್ಟು ಹಿಡಿದಿವೆ.
ಶಾಲೆಗಳಲ್ಲಿ ಎಸ್ ಡಿ ಎಂ ಸಿ ಹಾಗೂ ಶಿಕ್ಷಕರು ನಿಶ್ಚಯ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಅಳವಡಿಸಿದರೆ ಸಂತೋಷ. ಸಾವರ್ಕರ್ ಫೋಟೋ ಹಾಕಿದರೆ ಖುಷಿಯ ವಿಚಾರ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ. ಆದರೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಯಾರಿಗಾದರೂ ಅನಿಸಿದೆಯಾ? ಟಿಪ್ಪು ಕನ್ನಡದ ಕಗ್ಗೊಲೆ ಮಾಡಿದವನು. ಪರ್ಷಿಯನ್ ಭಾಷೆ ಬೆಳೆಸಿದವನು. ಟಿಪ್ಪು ಹೋರಾಡಿದ್ದು ತನ್ನ ಸ್ವಾರ್ಥಕ್ಕೆ ಹೊರತು ರಾಜ್ಯ ಉಳಿಸಿಕೊಳ್ಳಲು ಅಲ್ಲ ಎಂದು ಶಿಕ್ಷಣ ಸಚಿವರು ಕಿಡಿಕಾರಿದ್ದಾರೆ.
ಶಿಕ್ಷಣ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್, ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ, ಸಾವರ್ಕರ್ ಒಬ್ಬ ಗುಲಾಮ. ಶಾಲೆಗಳಲ್ಲಿ ಟಿಪ್ಪು ಫೋಟೋ ಹಾಕಬೇಕು ಹೊರತು ಸಾವರ್ಕರ್ ಫೋಟೋ ಅಲ್ಲ. ಸಾವರ್ಕರ್ ಫೋಟೋ ಹಾಕಿದರೆ ಫೋಟೋ ಕಿತ್ತು ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.