ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕನ ಮಗನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ನಡೆದಿದೆ.
ನಾಗೂರು ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಗುರುನಾಥ್ ರಾಠೋಡ್ ಅವರ ಮಗ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ಸುದರ್ಶನ್ ಎಂಬುವವನನ್ನು ಅಪಹರಿಸಿದ್ದ ದುಷ್ಕರ್ಮಿಗಳು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಹಣ ಕೊಟ್ಟರೆ ಮಗನನ್ನು ಬಿಡುಗಡೆ ಮಾಡುವುದಾಗಿ ಹೇಳಿ ಶಿಕ್ಷಕನಿಗೆ ಕರೆ ಮಾಡಿದ್ದಾರೆ. ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದರೆ ಬಾಲಕನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ.
ಬೆಳಿಗ್ಗೆ ಶಾಲೆಗೆ ಹೋಗಲು ಶಾಲಾ ಬಸ್ ಗೆ ಕಾಯುತ್ತಿದ್ದ ವೇಳೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ಇಎಸ್ಐ ಆಸ್ಪತ್ರೆಯ ವಿಳಾಸ ಕೇಳುವ ನೆಪದಲ್ಲಿ ಬಾಲಕ ಸುದರ್ಶನನ್ನು ಕಿಡ್ನಾಪ್ ಮಾಡಿದ್ದಾರೆ.
ಶಿಕ್ಷಕ ಗುರುನಾಥ್ ಕಲಬುರ್ಗಿ ವಿಶ್ವವಿದ್ಯಾಲಯ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಸಿವಿಲ್ ಡ್ರೆಸ್ ನಲ್ಲಿ ಕಲಬುರ್ಗಿ ನಗರದಾದ್ಯಂತ ಫೀಲ್ಡಿಗಿಳಿದಿದ್ದಾರೆ.
10 ಲಕ್ಷ ಹಣ ತರುತ್ತಿರುವುದಾಗಿ ಹೇಳುವಂತೆ ಬಾಲಕನ ತಂದೆ ಗುರುನಾಥ್ ನಿಂದ ದುಷ್ಕರ್ಮಿಗಳಿಗೆ ಕರೆ ಮಾಡಿಸಿದ್ದಾರೆ. ಕಲಬುರ್ಗಿ ಪಾಳಾ ಬಳಿಯಿರುವ ಶಾಲೆಯೊಂದರ ಬಳಿ ಹಣವಿಡುವಂತೆ ದುಷ್ಕರ್ಮಿಗಳು ಹೇಳಿದ್ದರು. ಅದರಂತೆ ಪೊಲಿಸರು ಸ್ಥಳಕ್ಕೆ ತೆರಳುತ್ತಿದ್ದಂತೆ ದುಷ್ಕರ್ಮಿಗಳು ಬಾಲಕನನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಸಧ್ಯ ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ.