ಬೆಂಗಳೂರು: ರಾಜ್ಯದ ಕೆಲ ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಮತ್ತೆ ಶಾಲೆಗಳು ಬಂದ್ ಆಗಲಿವೆಯೇ? 2 ಡೋಸ್ ಲಸಿಕೆ ಪಡೆಯದಿದ್ದರೆ ಶಾಲೆಗಳಿಗೆ ಪ್ರವೇಶ ನಿರಾಕರಿಸಲಾಗುತ್ತದೆಯೇ? ಎಂಬ ಹಲವಾರು ಗೊಂದಲಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತೆರೆ ಎಳೆದಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ.ಸಿ.ನಾಗೇಶ್, ಶಾಲೆಗಳಿಗೆ ಹೊಸದಾಗಿ ಯಾವುದೇ ಮಾರ್ಗಸೂಚಿ ಇರುವುದಿಲ್ಲ, ಈ ಹಿಂದೆ ಇದ್ದ ಮಾರ್ಗಸೂಚಿಗಳೇ ಮುಂದುವರೆಯುತ್ತವೆ. ನಾವು ಕೇವಲ ಜಾಗೃತಿ ಮೂಡಿಸಬಹುದು ಹೊರತು 2 ಡೋಸ್ ಲಸಿಕೆ ಪಡೆಯದಿದ್ದರೆ ಶಾಲೆಗೆ ಪ್ರವೇಶವೇ ಇಲ್ಲ ಎಂದು ನಿಯಮ ಜಾರಿಗೆ ತರಲು ಸಾಧ್ಯವಿಲ್ಲ ಎಂದು ತಿಳಿಸಿದರು.
IAF ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿನ ಸೇನಾ ಆಸ್ಪತ್ರೆಗೆ ಶಿಫ್ಟ್
ರಾಜ್ಯದ ಕೆಲ ಹಾಸ್ಟೆಲ್ ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹಾಸ್ಟೆಲ್ ಗಳಿಗೆ ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಜಂಟಿ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಧ್ಯಕ್ಕೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಬೇಕೆಂಬ ಗಂಭೀರ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಈವರೆಗೆ 172 ಶಿಕ್ಷಕ ಹಾಗೂ ಮಕ್ಕಳಿಗೆ ಕೊರೊನಾ ಸೋಂಕು ತಗುಲಿತ್ತು. ಅವರಲ್ಲಿ 100 ಜನರು ಚೇತರಿಸಿಕೊಂಡಿದ್ದಾರೆ. ಶಾಲೆಗಳಲ್ಲಿ ಎಲ್ಲಾ ಕಡೆ ಮಕ್ಕಳ ಹಾಜರಾತಿ ಕೂಡ ಇದೆ. ವಸತಿ ಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿ ವಿಶೇಷವಾಗಿ ಗಮನ ಹರಿಸಲಾಗುತ್ತದೆ ಎಂದರು.