ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತ್ರಿಸದಸ್ಯಪೀಠ ಮಧ್ಯಂತರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹೈಸ್ಕೂಲು ಹಾಗೂ ಕಾಲೇಜುಗಳು ನಾಳೆಯಿಂದಲೇ ಆರಂಭವಾಗುವ ಸಾಧ್ಯತೆ ಇದೆ.
ಶಾಲಾ-ಕಾಲೇಜು ಆರಂಭದ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ರೀತಿಯ ಅಡ್ಡಿಯಾಗಬಾರದು ಎಂಬುದು ನಮ್ಮೆಲ್ಲರ ಆಶಯ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.
ಹೈಕೋರ್ಟ್ ನೀಡುವ ಆದೇಶ ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ಶಾಲಾ-ಕಾಲೇಜು ಶೀಘ್ರ ಆರಂಭದ ಬಗ್ಗೆಯೂ ಇಂದು ಸಂಜೆ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಯಾವುದೇ ಅಡ್ಡಿ-ಆತಂಕವಿಲ್ಲದೇ ತರಗತಿಗಳು ನಡೆಯುವ ನಿಟ್ಟಿನಲ್ಲಿಯೂ ಸೂಕ್ತ ವಾತಾವರಣ ಕಲ್ಪಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ಉಡುಪಿ ಸೇರಿದಂತೆ ಯಾವುದೇ ಕಾಲೇಜಿನಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಮೂರು ದಿನ ರಜೆ ಘೋಷಿಸಲಾಗಿತ್ತು. ಇದೀಗ ಕೋರ್ಟ್ ಮಧ್ಯಂತರ ಆದೇಶ ನೀಡಿರುವುದರಿಂದ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದರು.