ಶಿವಮೊಗ್ಗ: ಶಿವಮೊಗ್ಗದಲ್ಲಿ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಮುಂದೆ ನಡೆಯಲಿದ್ದ ಅನಾಹುತವನ್ನು ಶಿವಮೊಗ್ಗ ಪೊಲೀಸರು ತಪ್ಪಿಸಿದ್ದಾರೆ ಎಂದು ತಿಳಿಸಿದರು.
ತೀರ್ಥಹಳ್ಳಿಯಲ್ಲಿ ಮಾತನಾಡಿದ ಗೃಹ ಸಚಿವರು, ಮತಾಂಧರ ಪರಿಚಯದಿಂದ ಈ ರೀತಿಯಾಗಿದೆ. ಬಂಧಿತ ಶಂಕಿತ ಉಗ್ರರಿಗೆ ಕರಾವಳಿ, ಕೇರಳ ಲಿಂಕ್ ಇದೆ. ಹೀಗಾಗಿಯೇ ಇಂತಹ ಕೃತ್ಯ ನಡೆಯುತ್ತಿದೆ. ಈ ಹಿಂದೆ ತೀರ್ಥಹಳ್ಳಿಯಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಸಹ ಆಗಿದೆ. ನಮ್ಮ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ದೀಪಾವಳಿಯಲ್ಲಿ ಪಟಾಕಿ ಹೊಡೆದ ಹಾಗೆ ಬಾಂಬ್ ಸ್ಪೋಟ ಆಗುತ್ತಿತ್ತು. ಇದೀಗ ಮೋದಿ ಅವರು ಬಂದ ನಂತರ ಇದೆಲ್ಲಾ ನಿಯಂತ್ರಣಕ್ಕೆ ಬರುತ್ತಿದೆ. ಇವರ ಹಿಂದೆ ಯಾವ ಯಾವ ಲಿಂಕ್ ಇದೆ? ಏನಿದೆ? ಎಂಬಿತ್ಯಾದಿ ಎಲ್ಲಾ ಆ್ಯಂಗಲ್ ನಲ್ಲಿ ತನಿಖೆ ಆಗುತ್ತಿದೆ. ಎನ್ಐಎ ಟೀಂ ಸಹ ಈಗಾಗಲೇ ಬಂದಿದೆ ಎಂದರು.
ಎನ್ಐಎ ದಾಳಿ ಸಂಬಂಧ ಮಾತನಾಡಿದ ಆರಗ ಜ್ಞಾನೇಂದ್ರ, ಪೊಲೀಸರು 15 ಜನರನ್ನು ಬಂಧಿಸಿದ್ದಾರೆ, ಎನ್ಐಎ 7 ಜನರನ್ನು ವಶಕ್ಕೆ ಪಡೆದಿದ್ದಾರೆ. ಯಾರು ಯಾರಿಗೆ ಯಾವ ಯಾವ ಆಯುಧ ಬಳಸಬೇಕೋ? ಯಾರು ಯಾರಿಗೆ ಯಾವ ಭಾಷೆ ಬಳಸಬೇಕೋ ಅದನ್ನ ಬಳಸಬೇಕಾಗುತ್ತದೆ. ಈ ಹಿಂದೆ ಯುಎಪಿಎ ಕೇಸ್ ಹಾಕಿದಾಗ ಅನವಶ್ಯಕವಾಗಿ ಹಾಕ್ತಿದ್ದಾರೆ ಎನ್ನುತ್ತಿದ್ದರು. ಈಗ ಏನಾಯ್ತು, ಇಂತಹ ಪ್ರಕರಣ ಬೆಳಕಿಗೆ ಬಂತು. ಇವರ ಮುಖ ನೋಡಿದರೆ, ಹಿನ್ನೆಲೆ ನೋಡಿದರೆ ಏನು ಅಲ್ಲ ಅನ್ಸುತ್ತೆ. ಆದರೆ ಮತಾಂಧತೆಗೆ ಒಳಗಾದಾಗ ಇಂತಹ ಕೃತ್ಯ ನಡೆಯುತ್ತದೆ. ಅಮೂಲಾಗ್ರವಾದ ಪರಿಶೀಲನೆ ನಡೆಯುತ್ತಿದೆ. ಪೊಲೀಸರಿಗೆ ಎಲ್ಲಾ ರೀತಿಯ ಜಾಡು ಸಿಗುತ್ತಿದೆ. ನಮ್ಮ ಸರಕಾರ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದೆ. ಕಾಂಗ್ರೆಸ್ ಸರಕಾರ ಇದ್ದಾಗ ಪೊಲೀಸರು ಈ ರೀತಿ ಕೆಲಸ ಮಾಡಲು ಆಗುತ್ತಿರಲಿಲ್ಲ. ನಮ್ಮ ಸರಕಾರ ಪೊಲೀಸರ ಕೆಲಸದಲ್ಲಿ ಮೂಗು ತೂರಿಸಲು ಹೋಗುವುದಿಲ್ಲ ಎಂದು ಹೇಳಿದರು.