ಬೆಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ವಶಕ್ಕೆ ಪಡೆದಿರುವ ಶಂಕಿತ ಉಗ್ರನ ಮೂಲ ಪತ್ತೆ ಹಚ್ಚಿದ್ದಾರೆ.
ಆಟೋ ಸ್ಫೋಟ ಪ್ರಕರಣದಲ್ಲಿ ಶಂಕಿತ ಉಗ್ರನಿಗೂ ಗಂಭೀರ ಗಾಯಗಳಾಗಿವೆ. ಶೇ.60ರಷ್ಟು ಗಾಯಗೊಂಡಿರುವ ಆತ ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಈ ನಡುವೆ ಶಂಕಿತ ಉಗ್ರನ ಮೂಲ ಶಿವಮೊಗ್ಗ ಎಂದು ತಿಳಿದುಬಂದಿದ್ದು, ಆತ ಕಳೆದ ಒಂದು ತಿಂಗಳಿಂದ ಮೈಸೂರಿನ ಲೋಕನಾಯಕ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮೈಸೂರಿನಲ್ಲಿ ವ್ಯಕ್ತಿಯೋರ್ವನಿಂದ 10 ಮೊಬೈಲ್ ಖರೀದಿ ಮಾಡಿದ್ದ. ಅಲ್ಲದೇ ತಾನು ಮೊಬೈಲ್ ರಿಪೇರಿ ಕಲಿಯುವುದಾಗಿ ಹೇಳಿ ಅಂಗಡಿಯೊಂದರಲ್ಲಿ ತರಬೇತಿ ಪಡೆದಿದ್ದ.
ಸ್ಫೋಟದ ಬಗ್ಗೆ ಮೈಸೂರಿನ ಬಾಡಿಗೆ ಮನೆಯಲ್ಲಿಯೇ ಸಂಪೂರ್ಣ ಸಂಚು ರೂಪಿಸಿದ್ದ ಎನ್ನಲಾಗಿದೆ. ನಕಲಿ ಆಧಾರ್ ಕಾರ್ಡ್, ನಕಲಿ ವಿಳಾಸ ಬಳಸಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮಂಗಳೂರು, ಕೋಯಮತ್ತೂರು ಸೇರಿದಂತೆ ವಿವಿಧೆಡೆ ಓಡಾಡಿದ್ದ ಎಂದು ತಿಳಿದುಬಂದಿದೆ.