ಬೆಂಗಳೂರು: ಮತದಾರರ ಪಟ್ಟಿ ಪರೀಷ್ಕರಣೆ ಹೆಸರಲ್ಲಿ ವೋಟರ್ ಐಡಿ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕಮಿಷ್ನರ್ ಗೆ ದೂರು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಕಮಿಷ್ನರ್ ಭೇಟಿಯಾಗಿ ರಾಜ್ಯ ಬಿಜೆಪಿ ಸರ್ಕಾರದ ಸಿಎಂ, ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ರಾಜ್ಯ ಸರ್ಕಾರ ಮತದಾರರ ಹಕ್ಕು ಕಿತ್ತುಕೊಳ್ಳುತ್ತಿದೆ. ವೋಟರ್ ಐಡಿ ಪರಿಷ್ಕರಣೆ ನೆಪದಲ್ಲಿ ಮತದಾರರ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮತದಾರರ ಪಟ್ಟಿಯಿಂದ ಈಗಾಗಲೇ 6000 ಹೆಸರನ್ನೇ ಡಿಲಿಟ್ ಮಾಡಲಾಗಿದೆ. ಎರಡು ಖಾಸಗಿ ಸಂಸ್ಥೆಗಳ ಮೂಲಕ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೂರು ನೀಡಿದ್ದಾರೆ.
ಕಮಿಷ್ನರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ವೋಟರ್ ಐಡಿ ಅಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರು ಸೇರಿದಂತೆ ಎಲ್ಲರನ್ನು ಬಂಧಿಸಲಿ. ಅಕ್ರಮದ ಹೊಣೆ ಹೊತ್ತು ಮೊದಲು ಸಿಎಂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಕಮಿಷ್ನರ್ ಹೇಳಿದ್ದಾರೆ. ಸಿಎಂ, ಸಚಿವರು, ಶಾಸಕರನ್ನು ಬಂಧಿಸಬಾರದು ಅಂತ ಇದ್ಯಾ? ಮೊದಲು ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.