ರಾಮನಗರ: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಿಟ್ಟು ಸಣ್ಣಪುಟ್ಟ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೆಳ ಮಟ್ಟದಲ್ಲಿರುವ ಒಂದಿಬ್ಬರನ್ನು ಬಂಧಿಸುವುದರಿಂದ ಪ್ರಕರಣ ಇತ್ಯರ್ಥವಾದಂತಲ್ಲ. ಯಾರು ಪ್ರಕರಣದ ರೂವಾರಿಗಳಾಗಿದ್ದಾರೋ, ಯಾರು ಕಿಂಗ್ ಪಿನ್ ಗಳಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ವೋಟರ್ ಐಡಿ ಅಕ್ರಮದಲ್ಲಿ ಭಾಗಿಯಾಗಿರುವ ಶಾಸಕರು, ಸಚಿವರ ಮಾತುಕತೆ, ಅವರ ವಹಿವಾಟಿನ ದಾಖಲೆಗಳು ನಮ್ಮ ಬಳಿ ಇವೆ. ಬೆಂಗಳೂರಿನ ಎಲ್ಲಾ 28 ವಿಧಾನಸಭೆ ಕ್ಷೇತ್ರಗಳ ಚುನಾವಣಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಜರುಗಿಸಲಿ ಎಂದು ಹೇಳಿದರು.
ಬಿಜೆಪಿ ಸರ್ಕಾರ ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ತಿಂದವರನ್ನು ಬಂಧಿಸಿದ್ದಾರೆ. ನೋಟು ಪ್ರಿಂಟ್ ಮಾಡುವ ಹಗರಣದಷ್ಟೇ ದೊಡ್ಡ ಹಗರಣ ಇದಾಗಿದೆ. ಆದರೂ ಹಿರಿಯ ಅಧಿಕಾರಿಗಳನ್ನು ಬಂಧಿಸುವ ಪ್ರಯತ್ನವನ್ನೂ ಮಾಡದೇ ಕೆಳಹಂತದ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಾಟಕವಾಡುತ್ತಿದ್ದಾರೆ. ಮತ ಹಾಗೂ ಮತದಾರರನ್ನೇ ಮಾರಾಟ ಮಾಡಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.