ಬೆಂಗಳೂರು: ಆರ್.ಆರ್. ನಗರದಲ್ಲಿ ಸಂಸದ ಡಿ.ಕೆ. ಸುರೇಶ್ ಏನು ಅಭಿವೃದ್ಧಿ ಮಾಡಿದ್ದಾರೆ ? ಕೀಳುಮಟ್ಟದ ರಾಜಕಾರಣವನ್ನು ಬಿಟ್ಟು ಸಂಸದರು ಗೌರವದಿಂದ ನಡೆದುಕೊಳ್ಳಬೇಕು ಎಂದು ಸಚಿವ ಮುನಿರತ್ನ ಎಚ್ಚರಿಸಿದ್ದಾರೆ.
ಆರ್.ಆರ್. ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದ್ದು, ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಮುನಿರತ್ನ ವಿರುದ್ಧ ಸಂಸದ ಡಿ.ಕೆ. ಸುರೇಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಚಿವ ಮುನಿರತ್ನ, ಡಿ.ಕೆ. ಸುರೇಶ್ ನನ್ನ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ. ವೋಟರ್ ಐಡಿ ಅಕ್ರಮ ಮಾಡಿದ್ದೇನೆ ಎಂದು ನನ್ನ ವಿರುದ್ಧ ದೂರು ನೀಡಿದ್ದಾರೆ. ಐಡಿ ಅಕ್ರಮ ಸಾಬೀತುಪಡಿಸಿದರೆ ನಾನು ರಾಜಕೀಯವನ್ನೇ ಬಿಡುತ್ತೇನೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ನಾಯಕರು ಈ ರೀತಿ ನಡೆದುಕೊಂಡಿದ್ದಕ್ಕೆ 17 ಜನ ಕಾಂಗ್ರೆಸ್ ಬಿಟ್ಟು ಹೋಗಿದ್ದು. ಡಿ.ಕೆ. ಸುರೇಶ್ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ನಮ್ಮ ಕ್ಷೇತ್ರಕ್ಕೆ ಅಭ್ಯರ್ಥಿ ಹಾಕಿ ಗೆದ್ದು ತೋರಿಸಲಿ ನೋಡೋಣ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಚುನಾವಣೆಗೆ ನಾನೂ ಮತಯಾಚನೆ ಮಾಡುವುದಿಲ್ಲ, ಕಾಂಗ್ರೆಸ್ ಅಭ್ಯರ್ಥಿಯೂ ಮತಯಾಚನೆ ಮಾಡದೇ ಗೆದ್ದು ತೋರಿಸಲಿ ಎರಡೂ ಪಕ್ಷದವರು ಜನರ ಮುಂದೆ ಹೋಗೋಣ ಜನರೇ ಈ ಬಗ್ಗೆ ತೀರ್ಮಾನ ಮಾಡಲಿ ಎಂದು ಗುಡುಗಿದ್ದಾರೆ.