ಬೆಂಗಳೂರು: ವೋಟರ್ ಐಡಿ ಅಕ್ರಮ ಪ್ರಕರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ವೋಟರ್ ಐಡಿ ಅಕ್ರಮ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ. ಇಲ್ಲವಾದಲ್ಲಿ ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಎಚ್ಚರಿಸಿದರು.
ಎನ್ ಜಿ ಒ ಮಾಡಿರುವ ಮತಪಟ್ಟಿ ಸೀಜ್ ಮಾಡಬೇಕು. ಚುನಾವಣಾಧಿಕಾರಿಗಳಿಂದ ಮತಪಟ್ಟಿ ಪರಿಷ್ಕರಣೆ ಆಗಬೇಕು. ಮೊದಲು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಲಿ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಯ ಅನುಮತಿಯನ್ನು ಮೊದಲು ಇವರೇ ಚಿಲುಮೆ ಸಂಸ್ಥೆಗೆ ನೀಡಿ ಈಗ ಅಕ್ರಮದ ಬಗ್ಗೆ ದೂರು ನೀಡುತ್ತಿದ್ದಂತೆ ಅನುಮತಿ ರದ್ದು ಮಾಡಿದ್ದಾರೆ. ಅಂದರೆ ಏನರ್ಥ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರ್ಥ. ವೋಟರ್ ಐಡಿ ಅಕ್ರಮದಲ್ಲಿ ಬಹುದೊಡ್ಡ ಹಗರಣವೇ ನಡೆದಿದೆ ಎಂಬುದು ಸಾಬೀತಾಗುತ್ತಿದೆ. ಸರ್ಕಾರವೇ ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ಕಿಡಿಕಾರಿದರು.