ಬೆಂಗಳೂರು: ವೋಟರ್ ಐಡಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾವು ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗವು ಹಿರಿಯ ಚುನಾವಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಚಿವರು ಶಾಸಕರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಗರಣದ ಕಿಂಗ್ ಪಿನ್ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೇಲಿನವರ ಆದೇಶದ ಮೇರೆಗೆ ನಾವು ಕೆಲಸ ಮಾಡಿದ್ದೇವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದರು. ಈ ಆದೇಶ ಕೊಟ್ಟವರು ಯಾರು ಎಂಬುದು ಗೊತ್ತಾಗಬೇಕು. ಈ ಬಗ್ಗೆ ಬಿಬಿಎಂಪಿ ತನಿಖೆ ನಡೆಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಅಥವಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು. ಅವರ ಉಸ್ತುವಾರಿಯಲ್ಲೇ ಚುನಾವಣೆ ಮಾಡಬೇಕು. ಯಾವುದೇ ಮತವನ್ನು ಸೇರ್ಪಡೆ ಮಾಡುವಾಗ ಅಥವಾ ತೆಗೆಯುವಾಗ ಆಯಾ ವ್ಯಕ್ತಿಯ ಅರ್ಜಿ ಇರಬೇಕು.
ಬಿಎಲ್ಒಗಳನ್ನು ಯಾರು ನೇಮಕ ಮಾಡಿದ್ದರು? ಈ ಬಿಎಲ್ಒಗಳನ್ನು ಕೇವಲ 3 ಕ್ಷೇತ್ರ ಚುನಾವಣಾಧಿಕಾರಿಗಳು ಮಾತ್ರ ಮಾಡಿಲ್ಲ. ಎಲ್ಲಾ 28 ಕ್ಷೇತ್ರಗಳ ಚುನಾವಣಾಧಿಕಾರಿಗಳೂ ಮಾಡಿದ್ದಾರೆ. ಸುಮಾರು 6-7 ಸಾವಿರ ಮಂದಿಗೆ ಈ ಬಿಎಲ್ಒ ಗುರುತಿನ ಚೀಟಿ ಕೊಟ್ಟಿದ್ದಾರೆ. ಇದರಲ್ಲಿ ಕೆಲವರು ಅಮಾಯಕರಿದ್ದು, ಕೆಲಸಕ್ಕೆ ಎಂದು ಸೇರಿದ್ದಾರೆ. ಆದರೆ ಇದರ ಮೂಲ ಕಿಂಗ್ ಪಿನ್ ಆಗಿ ಸರ್ಕಾರದ ಸಚಿವರು, ಶಾಸಕರಿಲ್ಲದೇ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಆರ್ ಆರ್ ನಗರದಲ್ಲಿ ದಾಳಿ ನಡೆಸಿ ದಾಖಲೆ ಸಂಗ್ರಹಿಸಲಾಗಿದೆ. ಎಲ್ಲಾ 28 ಕ್ಷೇತ್ರಗಳಲ್ಲಿ ಈ ಅಕ್ರಮ ನಡೆದಿದೆ. ಈ ಎಲ್ಲ ಕಡೆ ತನಿಖೆ ಆಗಬೇಕು. ಇಲ್ಲೆಲ್ಲ ಮತದಾರರ ಪಟ್ಟಿ ಮರುಪರಿಷ್ಕರಣೆ ಆಗಬೇಕು ಎಂದು ಒತ್ತಾಯಿಸಿದರು.