ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ವೈಯಕ್ತಿಕ ದ್ವೇಷಕ್ಕೆ ಗುರೂಜಿ ಹತ್ಯೆಯಾಗಿದೆ. ಇದರಲ್ಲಿ ಕಾನೂನು ಸುವ್ಯವಸ್ಥೆ ಲೋಪವಿಲ್ಲ ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪ ಸುಳ್ಳು. ಚಂದ್ರಶೇಖರ್ ಗುರೂಜಿ ಹತ್ಯೆಯಲ್ಲಿ ಕಾನೂನು ಸುವ್ಯವಸ್ಥೆ ಲೋಪವಲ್ಲ, ವೈಯಕ್ತಿಕ ದ್ವೇಷದಿಂದ ಕೊಲೆಯಾಗಿದೆ. ಇಂದಿನ ಯುವಕರ ಮನಸ್ಥಿತಿಯಿಂದಾಗಿ ಈ ರೀತಿ ಹತ್ಯೆಗಳು ನಡೆಯುತ್ತಿವೆ ಎಂದು ಹೇಳಿದರು.
ಮೊದಲು ಇಂದಿನ ಪೀಳಿಗೆಯ ಯುವಕರ ಮನಸ್ಥಿತಿ ಸರಿಪಡಿಸಬೇಕು. ದ್ವೇಷ, ಅಸೂಯೆ, ಸೇಡು ಇದರಿಂದ ಇಂದಿನ ಸಮಾಜ ಈ ರೀತಿ ಕೃತ್ಯಗಳತ್ತ ಮುಖ ಮಾಡುತ್ತಿರುವುದು ಕಳವಳಕಾರಿಯಾಗಿದೆ. ಕಾನೂನು ಸುವ್ಯವಸ್ಥೆ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಹಾನಿಯಾಗಿದೆ. ತುರ್ತು ಗಮನ ಹರಿಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳ ಜತೆ ಸಭೆಯನ್ನು ನಡೆಸಲಿದ್ದೇನೆ ಎಂದು ಹೇಳಿದರು.