ಬೆಂಗಳೂರು: ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ತಾಯಿ ಹಾಗೂ ಅವಳಿ ಮಕ್ಕಳು ಬಲಿಯಾದ ಘಟನೆ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿಯೂ ಇಂತದ್ದೇ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ 4 ವರ್ಷದ ಬುದ್ಧಿಮಾಂದ್ಯ ಮಗು ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ.
ಟ್ರೈನಿ ವೈದ್ಯರ ನಿರ್ಲಕ್ಷದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಲಹಳ್ಳಿಯ ಡೇವಿಡ್ ಎಂಬುವವರ ನಾಲ್ಕು ವರ್ಷದ ಮಗು ಡಾರ್ವಿನ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಬೆನ್ನು ಮೂಳೆಯಲ್ಲಿ ನೀರು ತುಂಬಿದೆ ಎಂದು ಹೇಳಲಾಗಿತ್ತು. ಆದರೆ ವೈದ್ಯರು ಪೋಷಕರ ಅನುಮತಿಯಿಲ್ಲದೇ ಮಗುವಿನ ಬೆನ್ನು ಮೂಳೆಯಲ್ಲಿ ತುಂಬಿದ್ದ ನೀರು ತೆಗೆಯಲು ಚಿಕಿತ್ಸೆ ಮಾಡಿದ್ದಾರೆ. ಚಿಕಿತ್ಸೆ ಬಳಿಕ ಪ್ರಜ್ಞೆ ತಪ್ಪಿದ್ದು ಮತ್ತೆ ಪ್ರಜ್ಞೆಯೇ ಬಾರದೇ ಮಗು ಸಾವನ್ನಪ್ಪಿದೆ.
ಟ್ರೈನಿ ವೈದ್ಯರು ಬೇಜವಾಬ್ದಾರಿಯಿಂದ ಚಿಕಿತ್ಸೆ ಮಾಡಿ ನನ್ನ ಮಗುವನ್ನೇ ಸಾಯಿಸಿದ್ದಾರೆ ಎಂದು ಡೇವಿಡ್ ಕಣ್ಣೀರಿಟ್ಟಿದ್ದಾರೆ. ಆಸ್ಪತ್ರೆ ಮುಂದೆ ಮಗು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.