ರಾಜ್ಯ ಸರ್ಕಾರ, ಮಾರ್ಚ್ 1ರಿಂದ ಅನ್ವಯವಾಗುವಂತೆ ಸಾರಿಗೆ ನೌಕರರ ವೇತನವನ್ನು ಶೇಕಡ 15 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ ವೇತನ ಮತ್ತು ಇತರ ಹಿಂಬಾಕಿಯನ್ನು ಯಾವ ದಿನಾಂಕದಿಂದ ಪಾವತಿಸಬೇಕು ಎಂಬುದರ ಶಿಫಾರಸ್ಸನ್ನು ತಾನು ರಚಿಸಿದ್ದ ಏಕ ಸದಸ್ಯ ಸಮಿತಿಯಿಂದ ಪಡೆಯಲು ತೀರ್ಮಾನಿಸಲಾಗಿದೆ.
ಆದರೆ ಸರ್ಕಾರದ ಈ ಆದೇಶ ಸಾರಿಗೆ ನೌಕರರಿಗೆ ತೃಪ್ತಿ ತಂದಿಲ್ಲ. ಅಲ್ಲದೆ ನೌಕರರ ಸಂಘಟನೆಗಳ ವಿರೋಧದ ಮಧ್ಯೆಯೂ ಏಕಪಕ್ಷೀಯವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಮಾರ್ಚ್ 21ರಿಂದ ಮುಷ್ಕರ ಆರಂಭಿಸುವ ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನೌಕರರ ಸಂಘಟನೆಗಳು ಹೇಳಿವೆ.
ಮೂಲ ವೇತಕ್ಕೆ ಡಿಎ ವಿಲೀನಗೊಳಿಸಿ ಪರಿಷ್ಕೃತ ವೇತನವನ್ನು ನೀಡಬೇಕು ಹಾಗೂ ಶೇಕಡ 25ರಷ್ಟು ಹೆಚ್ಚಳ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಆದರೆ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲವಾದ ಕಾರಣ ಮುಷ್ಕರ ನಡೆಸಲಿದ್ದೇವೆ ಎಂದು ಸಂಘಟನೆಗಳು ತಿಳಿಸಿವೆ. ಹೀಗಾಗಿ ಮುಷ್ಕರದ ಸಂದರ್ಭದಲ್ಲಿ ಬಸ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.