ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದ್ದು, ರೂಪಾಂತರಿ ವೈರಸ್ ಒಮಿಕ್ರಾನ್ ಪ್ರಕರಣಗಳು ಸ್ಫೋಟಗೊಳ್ಳುತ್ತಿವೆ. ರಾಜ್ಯದಲ್ಲಿ ಲಾಕ್ ಡೌನ್ ನಂತಹ ಕಠಿಣ ನಿಯಮ ಜಾರಿ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ವೀಕೆಂಡ್, ಕರ್ಫ್ಯೂ ಹಾಗೂ ಲಾಕ್ ಡೌನ್ ಬಗ್ಗೆ ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಪಣಜಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡಬಹುದು ಆದರೆ ಇದರಿಂದ ಪ್ರಾಣಾಪಾಯ ಕಡಿಮೆ. ಕೋವಿಡ್ ನಿಯಂತ್ರಣಕ್ಕೆ ಕೆಲ ಕಠಿಣ ನಿಯಮ ಜಾರಿಗೆ ತರಲಿ ಆದರೆ ಲಾಕ್ ಡೌನ್ ಮಾಡಿ ಮತ್ತಷ್ಟು ಸಂಕಷ್ಟ ಕೊಡುವುದು ಯಾಕೆ ? ಎಂದು ಪ್ರಶ್ನಿಸಿದ್ದಾರೆ.
ಕರ್ಫ್ಯೂ, ಲಾಕ್ ಡೌನ್ ಕ್ರಮ ಬೇಡ. ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಲಾಕ್ ಡೌನ್ ನಿಂದಾಗಿ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಆರ್ಥಿಕವಾಗಿ ಕುಗ್ಗಿದ್ದಾರೆ. ಹೀಗಿರುವಾಗ ಮೂರನೇ ಅಲೆಯಲ್ಲಿಯೂ ಮತ್ತೆ ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಹೇರುವುದರಿಂದ ಜನರನ್ನು ಮತ್ತೆ ಸಂಕಷ್ಟಕ್ಕೆ ದೂಡಿದಂತಾಗುತ್ತದೆ. ಜೀವದ ಜತೆಗೆ ಜೀವನ ನಡೆಸುವುದೂ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.