ಬೆಂಗಳೂರು: ವಿಶೇಷಚೇತನ ಮಹಿಳೆ ಮೇಲೆ ಎ ಎಸ್ ಐ ಹಲ್ಲೆ ಆಘಾತ ತಂದಿದೆ ಎಂದು ಹೇಳಿರುವ ಸಂಚಾರಿ ವಿಭಾಗದ ಜಂಟಿ ಉಪ ಆಯುಕ್ತ ರವಿಕಾಂತೇಗೌಡ, ಮಹಿಳೆ ವಿರುದ್ಧ ಕೂಡ 2 ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಟೋಯಿಂಗ್ ವ್ಯವಸ್ಥೆ ಬದಲಿಸುವ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದ್ದು, ಸಭೆಗೂ ಮುನ್ನ ಸಂಚಾರಿ ವಿಚಾರದ ಪೊಲೀಸ್ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ರವಿಕಾಂತೇಗೌಡ, ಟೋಯಿಂಗ್ ವಿಚಾರವಾಗಿ ನಮ್ಮ ಸಿಬ್ಬಂದಿ ವಿರುದ್ಧ ಹಲವು ಆರೋಪಗಳು ಬಂದಿದ್ದವು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲಾ ಅಧಿಕಾರಿಗಳು 25-30 ವರ್ಷ ಸೇವೆ ಸಲ್ಲಿಸಿದ್ದಾರೆ. ಯಾರೋ ಒಬ್ಬ ಅಧಿಕಾರಿ ಮಾಡಿದ್ದಕ್ಕೆ ಇಲಾಖೆಗೆ ಕಳಂಕ. ಯಾರೂ ಕೂಡ ಗಲಾಟೆ ಮಾಡಿ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ ಎಂದರು.
ವಿಶೇಷಚೇತನ ಮಹಿಳೆ ಮೇಲೆ ಎ ಎಸ್ ಐ ಹಲ್ಲೆ ಆಘಾತ ತಂದಿದೆ. ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸಿಬ್ಬಂದಿ ವರ್ತನೆ ಸರಿಯಿಲ್ಲ ಎಂದು ಸಸ್ಪೆಂಡ್ ಮಾಡಿದ್ದೇವೆ. ಇನ್ನು ಮಹಿಳೆ ಮೇಲೆ ಕೂಡ ಎರಡು ಕೇಸ್ ದಾಖಲಾಗಿದೆ. ಮಹಿಳೆ ಅನಧಿಕೃತವಾಗಿ ವಾಹನ ಸವಾರರಿಂದ ಹಣ ಪಡೆಯುತ್ತಿದ್ದರು. ಸಿಬ್ಬಂದಿ ಹಾಗೂ ಮಹಿಳೆ ನಡುವೆ ಗಲಾಟೆಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ಸೂಚಿಸಲಾಗಿದೆ.
ಇನ್ನು ಫುಡ್ ಡಿಲೆವರಿ ಬಾಯ್ ವಾಹನ ಟೋಯಿಂಗ್ ವಿಚಾರವಾಗಿ, ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿದ್ದಕ್ಕೆ ಟೋಯಿಂಗ್ ಮಾಡಲಾಗಿದೆ. ಆದರೆ ಯಾರೋ ವಿಡಿಯೋ ಎಡಿಟ್ ಮಾಡಿ ಅಪ್ ಲೋಡ್ ಮಾಡಿದ್ದಾರೆ. ಆದರೆ ಕೆಲ ದೂರ ತೆರಳುತ್ತಿದ್ದಂತೆ ಸಿಬ್ಬಂದಿಗಳು ವಾಹನ ವಾಪಸ್ ನೀಡಿದ್ದಾರೆ ಎಂದು ಹೇಳಿದರು.