ಚಿಕ್ಕಮಗಳೂರು: ವಿವಾಹಿತ ಗ್ರಾಮಲೆಕ್ಕಿಗನ ಜೊತೆ ಎನ್.ಆರ್.ಪುರ ತಹಶೀಲ್ದಾರ್ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಎನ್.ಆರ್.ಪುರ ತಹಶೀಲ್ದಾರ್ ಗೀತಾ ಗ್ರಾಮ ಲೆಕ್ಕಿಗ ವಿವಾಹಿತ ಶ್ರೀನಿಧಿ ಎಂಬುವವರ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ವಿಷಯ ತಿಳಿದ ಶ್ರೀನಿಧಿ ಪತ್ನಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಇದೀಗ ತಹಶೀಲ್ದಾರ್ ಗೀತಾ ಅವರಿಗೆ 7 ದಿನಗಳಲ್ಲಿ ಉತ್ತರ ನಿಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.
ಪತಿಯಿಂದ ವಿಚ್ಛೇಧನ ಪಡೆದಿರುವ ತಹಶೀಲ್ದಾರ್ ಗೀತಾ, ಇದೀಗ ವಿವಾಹಿತನೊಂದಿಗೆ ವಿವಾಹವಾಗಿರುವುದು ವಿವಾದಕ್ಕೆ ಕಾರಣವಾಗಿದೆ. 2006ರಲ್ಲಿ ದಾವಣಗೆರೆಯಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿರುವ ಶ್ರೀನಿಧಿ ಜುಲೈ 19ರಂದು ತಹಶೀಲ್ದಾರ್ ಗೀತಾ ಜೊತೆ ಮತ್ತೊಂದು ರಿಜಿಸ್ಟರ್ ಮದುವೆಯಾಗಿದ್ದಾರೆ. ಅಲ್ಲದೇ ಮದುವೆಯ ವೇಳೆ ತಹಶೀಲ್ದಾರ್ ಗೀತಾ ತಾನು ಅವಿವಾಹಿತೆ ಎಂದು ತೋರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಶ್ರೀನಿಧಿ ಮೊದಲ ಪತ್ನಿ ನ್ಯಾಯಕ್ಕಾಗಿ ಡಿಸಿ ಕಚೇರಿ ಮೆಟ್ಟಿಲೇರಿದ್ದು, ತನ್ನ ಜೀವಕ್ಕೆ ತೊಂದರೆಯಾದರೆ ತಹಶೀಲ್ದಾರ್ ಗೀತಾ ಕಾರಣ. ಆಕೆ ಪ್ರಭಾವಿಯಾಗಿರುವುದರಿಂದ ತನಗೆ ತೊಂದರೆ ಸಾಧ್ಯತೆ ಇದೆ ಎಂದು ದೂರಿದ್ದಾರೆ.