ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಬೆನ್ನಲ್ಲೇ ರಾಜ್ಯ ಸರ್ಕಾರವೇ ಗೊಂದಲಗಳಿಗೆ ತೆರೆ ಎಳೆಯುವ ಯತ್ನ ನಡೆಸಿದೆ. ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯ ಸರ್ಕಾರದಿಂದಲೇ ದ್ವಜಾರೋಹಣ ನೆರವೇರಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಚಾಮರಾಜಪೇಟೆ ಮೈದಾನದಲ್ಲಿ ಬೇರೆ ಯಾರಿಗೂ ಧ್ವಜಾರೋಹಣ ನೆರವೇರಿಸಲು ಅವಕಾಶವಿಲ್ಲ, ಸರ್ಕಾರದಿಂದಲೇ ಧ್ವಜಾರೋಹಣ ನೆರವೇರಿಸಲಾಗುವುದು ಎಂದರು.
ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಯಾವ ಸಂಘ-ಸಂಸ್ಥೆಗಳಿಗಾಗಲಿ, ಶಾಸಕ ಜಮೀರ್ ಅಹ್ಮದ್ ಗಾಗಲಿ ಅವಕಾಶವಿಲ್ಲ. ಬೆಂಗಳೂರಿನ ಉತ್ತರ ತಾಲೂಕಿನ ಸಹಾಯಕ ಆಯುಕ್ತರು ಆಗಸ್ಟ್ 15ರಂದು ಸರ್ಕಾರದ ವತಿಯಿಂದ ಧ್ವಜಾರೋಹಣ ಮಾಡಲಿದ್ದಾರೆ. ರಾಷ್ಟ್ರಧ್ವಜ ನೀತಿ-ನಿಯಮದಂತೆ ಎಲ್ಲರೂ ಧ್ವಜಾರೋಹಣದ ವೇಳೆ ಭಾಗವಹಿಸಬಹುದು ಎಂದು ತಿಳಿಸಿದರು.
ಅಲ್ಲದೇ ಚಾಮರಾಜಪೇಟೆ ಮೈದಾನ ಇನ್ಮುಂದೆ ಈದ್ಗಾ ಮೈದಾನ ಎಂದು ಇರುವುದಿಲ್ಲ. ಗುಟ್ಟಳ್ಳಿ, ಚಾಮರಾಜಪೇಟೆ ಕಂದಾಯ ಇಲಾಖೆ ಅಂತಾ ಇರಲಿದೆ. ಮೈದಾನ ಸಧ್ಯಕ್ಕೆ ಕಂದಾಯ ಇಲಾಖೆಯ ಸ್ವತ್ತಾಗಿದೆ. ಅದನ್ನು ಬಿಬಿಎಂಪಿಗೆ ಕೊಡಬೇಕೆ, ಬಿಡಿಎಗೆ ಕೊಡಬೇಕೇ ಅಥವಾ ಕಂದಾಯ ಇಲಾಖೆಯೇ ಉಳಿಸಿಕೊಳ್ಳಬೇಕೇ ಎಂಬ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.