ಶಿವಮೊಗ್ಗ: ಬಿಜೆಪಿ ಇಂದು ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ, ರಾಷ್ಟ್ರೀಯ ವಿಚಾರಧಾರೆ ಸಿದ್ಧಾಂತಗಳನ್ನು ಹೊಂದಿರುವ ಪಕ್ಷ. ನಮ್ಮ ಒಬ್ಬನೇ ಒಬ್ಬ ಕಾರ್ಯಕರ್ತನನ್ನು ಮುಟ್ಟಿ ನೋಡಿದರೂ ಅದರ ಪರಿಣಾಮ ಬೇರೆಯಾಗುತ್ತದೆ. ಈಗ ನಮ್ಮ ತಂಟೆಗೆ ಬಂದರೆ ತಿರುಗಿ ಹೊಡೆಯುತ್ತೇವೆ ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿವಾದ ಸೃಷ್ಟಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಒಂದು ಕಾಲಕ್ಕೆ ನಮ್ಮ ಸಂಘಟನೆ ಬಹಳ ದುರ್ಬಲವಾಗಿತ್ತು. ಆಗ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೂ ನಮ್ಮ ಹಿರಿಯರು ಶಾಂತವಾಗಿರಿ, ಏನೇ ಮಾಡಿದರೂ ಶಾಂತಿಯಿಂದಿರಿ ಎನ್ನುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಪ್ರಪಂಚದಲ್ಲಿಯೇ ಬಿಜೆಪಿ ಸದೃಢವಾಗಿ ಬೆಳೆದಿದೆ. ನಾವಾಗೇ ನಾವು ಯಾರ ತಂಟೆಗೂ ಹೋಗಲ್ಲ. ನಮ್ಮ ತಂಟೆಗೆ ಬಂದರೆ ಸುಮ್ಮನಿರಬೇಕಿಲ್ಲ ಎಂದಿದ್ದಾರೆ.
BIG NEWS: ಬಿಜೆಪಿಯಿಂದ ದ್ವೇಷದ ರಾಜಕಾರಣ; ದುರುದ್ದೇಶದಿಂದ ಖೇಲ್ ರತ್ನ ಹೆಸರು ಬದಲಾವಣೆ; ಸಿದ್ದರಾಮಯ್ಯ ಕಿಡಿ
ಹಾದಿ ಬೀದಿಯಲ್ಲಿ ನಮ್ಮ ಕಾರ್ಯಕರ್ತರ ಕಗ್ಗೊಲೆ ನಡೆದಿದೆ. ಹಿಂದೆ ಸಿಕ್ಕ ಸಿಕ್ಕ ಕಾರ್ಯಕರ್ತರನ್ನು ಹೊಡೆಯಲಾಗಿತ್ತು. ಆದರೆ ಶಾಂತಿಯಿಂದಿರಿ ಎನ್ನುತ್ತಿದ್ದರು. ಅಂದಿನ ಪಕ್ಷದ ಸ್ಥಿತಿ ಬೇರೆ ಇತ್ತು. ಇಂದು ಇಡೀ ದೇಶಾದ್ಯಂತ ಪಕ್ಷ ಬೆಳೆದಿದೆ ಇಂದು ನಮ್ಮ ತಂಟೆಗೆ ಬಂದರೂ ಶಾಂತಿಯಿಂದಿರಬೇಕಿಲ್ಲ ಎಂದು ಹೇಳಿದ್ದಾರೆ.
ಸಚಿವ ಈಶ್ವರಪ್ಪ ಹೇಳಿಕೆ ವಿವಾದಕ್ಕೀಡಾಗಿದ್ದು, ಈ ಬಗ್ಗೆ ಕಿಡಿಕಾರಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಆರ್.ಎಸ್.ಎಸ್.ನವರಿಗೆ ಪ್ರಚೋದನಕಾರಿ ಹೇಳಿಕೆ ನೀಡುವವರೇ ಬೇಕು. ಇಂತವರಿಂದ ಏನನ್ನೂ ನಿರೀಕ್ಷಿಸಲಾಗದು. ಸಚಿವರಿಗೆ ರಾಜ್ಯದ ಹಿತ ಮುಖ್ಯವಲ್ಲ, ಗೊಂದಲ ಸೃಷ್ಟಿಸುವುದೇ ಉದ್ದೇಶವಾಗಿದೆ ಮೊದಲು ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡುವಂತೆ ಸಿಎಂ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.