ಬೆಂಗಳೂರು: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಳ್ಳು ಹೇಳಿದೆ. ಸಚಿವ ಶ್ರೀರಾಮುಲು ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಮ್ಸ್ ನಲ್ಲಿ ದುರಂತ ಸಂಭವಿಸಿದೆ. ಆದರೂ ಈವರೆಗೂ ಆರೋಗ್ಯ ಸಚಿವರು, ಉಸ್ತುವಾರಿ ಸಚಿವರು ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ. ಸಚಿವ ಸುಧಾಕರ್ ಬಳ್ಳಾರಿಗೆ ಹೋಗಿಲ್ಲ. ಶ್ರೀರಾಮುಲು ಅವರು ಸುಳ್ಳು ಹೇಳಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕರೆಂಟ್ ಹೋಗಿದ್ದರಿಂದಲೇ ಸಮಸ್ಯೆಯಾಗಿ ರೋಗಿಗಳು ಸತ್ತಿದ್ದಾರೆ ಎಂಬುದು ಗೊತ್ತಿದ್ದು ವಿದ್ಯುತ್ ಕಡಿತಗೊಂಡು ಆಸ್ಪತ್ರೆಯಲ್ಲಿ ರೋಗಿಗಳು ಸಾವನ್ನಪ್ಪಿಲ್ಲ ಎಂದು ಸದನದಲ್ಲಿ ಶ್ರೀರಾಮುಲು ಹೇಳಿದರು. ಕರೆಂಟ್ ಹೋಗಿ ರೋಗಿಗಳು ಸತ್ತಿಲ್ಲ ಎಂದ ಮೇಲೆ ಪ್ರಕರಣದ ತನಿಖೆಗಾಗಿ ಸಮಿತಿ ರಚನೆ ಯಾಕೆ ಮಾಡಿದರು? ಸುಳ್ಳು ಹೇಳಿದ್ದಕ್ಕೆ ಶ್ರೀರಾಮುಲು ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಗುಡುಗಿದರು.