ಬೆಂಗಳೂರು: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿನ ರೋಗಿಗಳ ದುರಂತ ಸಾವು ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಮೂವರು ರೋಗಿಗಳ ಸಾವಿಗೆ ಸರ್ಕಾರವೇ ನೇರ ಹೊಣೆ, ಆರೋಗ್ಯ, ವೈದ್ಯಕೀಯ ಸಚಿವರೇ ಜವಾಬ್ದಾರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡ ಪರಿಣಾಮ ನಿನ್ನೆ ರಾತ್ರಿ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ. ವಿದ್ಯುತ್ ಇಲ್ಲದ ಕಾರಣ ಜನರೇಟರ್ ಕಾರ್ಯನಿರ್ವಹಿಸಿಲ್ಲ, ವೆಂಟಿಲೇಟರ್ ಕೂಡ ಸಮಸ್ಯೆಯಾಗಿದೆ. ಐಸಿಯುನಲ್ಲಿದ್ದ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರೇ ನೇರ ಜವಾಬ್ದಾರಿ. ಸರ್ಕಾರದ ಬೇಜವಾಬ್ದಾರಿಯಿಂದಾಗಿಯೇ ಈ ದುರಂತ ಸಂಭವಿಸಿದೆ. ಘಟನೆ ಹೊಣೆ ಹೊತ್ತು ಮೊದಲು ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ ಹಾಗೂ ಶ್ರೀರಾಮುಲು, ಸರ್ಕಾರ ಹೇಗೆ ಜವಾಬ್ದಾರಿಯಾಗಲು ಸಾಧ್ಯ? ನಿಮ್ಮ ಕಾಲದಲ್ಲಿ ನಡೆದ ರೋಗಿಗಳ ಸಾವಿಗೆ ನಿಮ್ಮ ಸರ್ಕಾರ ಯಾವ ಕ್ರಮ ಕೈಗೊಂಡಿತ್ತು ಎಂದು ಪ್ರಶ್ನಿಸಿದರು. ವಿದ್ಯುತ್ ಸಮಸ್ಯೆಯಿಂದ ರೋಗಿಗಳು ಸಾವನ್ನಪ್ಪಿಲ್ಲ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಕೆಂಡಾಮಂಡಲರಾದ ಸಿದ್ದರಾಮಯ್ಯ, ಕರೆಂಟ್ ಹೋಗಿದ್ದರಿಂದ ಜನರೇಟರ್ ಕೂಡ ಕಾರ್ಯನಿರ್ವಹಿಸಿಲ್ಲ. ಇದರಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಸಾಧ್ಯವಾಗಿಲ್ಲ. ಸಾವಿನ ಜೊತೆ ಚಲ್ಲಾಟವಾಡುತ್ತಿದ್ದೀರಾ? ಮೊದಲು ತಪ್ಪನ್ನು ಒಪ್ಪಿಕೊಳ್ಳಿ ಎಂದು ಗುಡುಗಿದರು. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.