ವಾಹನಗಳಿಗೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ವಾಹನ ನೋಂದಣಿ ಮಾಡಿಸಬೇಕೆಂದರೆ ವಿಮೆ ಇರಲೇಬೇಕಾಗುವ ಕಾರಣ ಆ ಸಂದರ್ಭದಲ್ಲಿ ವಿಮೆ ಮಾಡಿಸುವ ಬಹಳಷ್ಟು ಮಂದಿ ನಂತರ ರಿನಿವಲ್ ಮಾಡಲು ಮುಂದಾಗುವುದಿಲ್ಲ. ಅಪಘಾತಗಳು ನಡೆದ ಸಂದರ್ಭದಲ್ಲಿ ಅಂತಹ ವಾಹನಗಳ ಮಾಲೀಕರಿಗೆ ತೀವ್ರ ಸಂಕಷ್ಟ ಎದುರಾಗುತ್ತದೆ.
ಅಷ್ಟಾದರೂ ಕೂಡಾ ವಿಮೆ ಮಾಡಿಸಲು ಬಹುತೇಕ ವಾಹನ ಮಾಲೀಕರು ನಿರಾಸಕ್ತಿ ವಹಿಸುತ್ತಾರೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ 30 ಕೋಟಿಗೂ ಅಧಿಕ ವಾಹನಗಳಿದ್ದು, ಈ ಪೈಕಿ ಅರ್ಧದಷ್ಟು ವಾಹನಗಳಿಗೆ ವಿಮೆ ರಿನಿವಲ್ ಆಗಿಲ್ಲವೆಂದು ಹೇಳಲಾಗಿದೆ. ಇದೀಗ ಇಂತಹ ವಾಹನಗಳ ಮಾಲೀಕರಿಗೆ ಶಾಕ್ ನೀಡಲು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಮುಂದಾಗಿದೆ.
ಯಾವ ವಾಹನಗಳಿಗೆ ವಿಮೆ ರಿನಿವಲ್ ಆಗಿಲ್ಲ ಎಂಬ ಮಾಹಿತಿ ಸಾರಿಗೆ ಸಚಿವಾಲಯದ ಬಳಿ ಇದ್ದು, ಅಂತಹ ವಾಹನಗಳ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ಸಾರಿಗೆ ಅಥವಾ ಪೊಲೀಸ್ ಇಲಾಖೆ ತಪಾಸಣೆ ನಡೆಸುವ ಸಂದರ್ಭದಲ್ಲಿ ವಿಮೆ ಇಲ್ಲದ ವಾಹನಗಳು ಸಿಕ್ಕಿ ಬಿದ್ದರೆ ಅಂತಹ ಸಂದರ್ಭದಲ್ಲಿ ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಹೀಗಾಗಿ ನೋಟಿಸ್ ನೀಡುವುದರ ಜೊತೆಗೆ ವಿಮೆ ರಿನಿವಲ್ ಮಾಡದ ಮಾಲೀಕರಿಗೆ ದಂಡ ವಿಧಿಸುವ ಸಾಧ್ಯತೆಯೂ ಇದೆ. ಅಲ್ಲದೆ ಅಂತಹ ವಾಹನಗಳಿಗೆ ಕೂಡಲೇ ವಿಮೆ ರಿನಿವಲ್ ಮಾಡಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗುತ್ತದೆ ಎಂದು ಹೇಳಲಾಗಿದೆ.