ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ರ ಕಾರಿನ ಮೇಲೆ ಬಿಜೆಪಿ ಬೆಂಬಲಿಗರು ಚಪ್ಪಲಿ ತೂರಿದ್ದಾರೆ. ಮಧುರೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಚಿವ ಪಳನಿವೇಲ್, ಹುತಾತ್ಮ ಯೋಧ ಡಿ. ಲಕ್ಷ್ಮಣನ್ ಅವರಿಗೆ ಗೌರವ ಸಮರ್ಪಿಸಿ ವಾಪಸ್ ಆಗುತ್ತಿದ್ರು.
24 ವರ್ಷದ ರೈಫಲ್ಮ್ಯಾನ್ ಡಿ. ಲಕ್ಷ್ಮಣನ್, ತಿರುಮಂಗಲಂ ಬಳಿಯ ಪಡುಪಟ್ಟಿ ಮೂಲದವರು. ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗುರುವಾರ ನಡೆದ ದಾಳಿಯಲ್ಲಿ ಉಗ್ರರು ಲಕ್ಷ್ಮಣನ್ ಸೇರಿದಂತೆ ನಾಲ್ವರು ಯೋಧರನ್ನು ಹತ್ಯೆ ಮಾಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಲು ಆಗಮಿಸುವ ನಿರೀಕ್ಷೆ ಇದ್ದಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಗರು ಮಧುರೈ ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದರು. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ಸಚಿವ ಪಳನಿವೇಲ್ ಅವರ ಕಾರನ್ನು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತೆಯರು ಅಡ್ಡಗಟ್ಟಿದ್ದಾರೆ.
ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅವರಲ್ಲೊಬ್ಬರು ಸಚಿವರ ಕಾರಿನತ್ತ ಚಪ್ಪಲಿ ತೂರಿದ ಘಟನೆಯೂ ನಡೆದಿದೆ. ಬಿಜೆಪಿ ಅಧ್ಯಕ್ಷರ ಆಗಮನಕ್ಕಾಗಿ ಕಾಯುತ್ತಿದ್ದ ಕಾರ್ಯಕರ್ತರನ್ನು ಸಚಿವರು ಬರುತ್ತಿದ್ದಂತೆ ಚದುರಿಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಬಿಜೆಪಿ ಬೆಂಬಲಿಗರು ರೊಚ್ಚಿಗೆದ್ದಿದ್ದರು.
ಈ ಮಧ್ಯೆ ಯೋಧ ಲಕ್ಷ್ಮಣನ್ ಹುತಾತ್ಮರಾಗಿರುವ ಬಗ್ಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸೈನಿಕನ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.