ಬೆಂಗಳೂರು: ರೌಡಿ ಶೀಟರ್ ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸ್ಯಾಂಟ್ರೋ ರವಿಯ 20 ವರ್ಷಗಳ ದಂಧೆ ಎಲ್ಲಾ ಅಂಶಗಳನ್ನು ತನಿಖೆಗೆ ಒಳಪಡಿಸುತ್ತೇವೆ. ಆತ 20 ವರ್ಷಗಳಲ್ಲಿ ಯಾರ ಯಾರ ಸಂಪರ್ಕದಲ್ಲಿ ಇದ್ದ ಆತನ ವ್ಯವಹಾರವೇನು ಎಂಬುದು ತನಿಖೆ ಮೂಲಕ ಎಲ್ಲವೂ ಬಯಲಾಗಲಿದೆ ಎಂದರು.
ಸ್ಯಾಂಟ್ರೋ ರವಿ ಎಲ್ಲಾ ರಾಜಕೀಯ ನಾಯಕರೊಂದಿಗೂ ಸಂಪರ್ಕದಲ್ಲಿದ್ದ, ವಿಪಕ್ಷಗಳ ನಾಯಕರ ಜೊತೆಯೂ ಸಂಪರ್ಕದಲ್ಲಿದ್ದ. ಈಗ ಬಿಡುಗಡೆಯಾಗಿರುವ ಫೋಟೋ, ಕಾಲ್ ಲಿಸ್ಟ್ ಗಳು ನಕಲಿಯಾಗಿವೆ. ಅವೆಲ್ಲ ಈಗಿನ ತಂತ್ರಜ್ಞಾನದಲ್ಲಿ ಮಾಡಿಕೊಂಡಿರುವುದು. ಫೋಟೋ ಆಧಾರದ ಮೇಲೆ ಕ್ರಮಕೈಗೊಳ್ಳಲು ಆಗುವುದಿಲ್ಲ. ಆತನ ಮೇಲಿನ ಎಲ್ಲಾ ಪ್ರಕರಣಗಳನ್ನು ಸಂಪೂರ್ಣ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದರು.
ಪ್ರಶ್ನೆ ಕೇಳುವವರೆಲ್ಲ ತನಿಖಾಧಿಕಾರಿಗಳಾಗುವುದು ಬೇಡ. ಪೊಲೀಸರು ನಿಜವಾದ ತನಿಖೆ ನಡೆಸುತ್ತಾರೆ. ಇಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.