ಬೆಂಗಳೂರು: ಅಧಿವೇಶನ ಆರಂಭವಾದರೂ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿಯೇ ಉಳಿದಿದ್ದು, ಇಂದು ತೆರೆ ಬೀಳಲಿದೆ.
ಇಂದು ಬಿಜೆಪಿ ವಿಧಾನಸಭೆ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಿದೆ. ಒಂದೆಡೆ ಅಧಿವೇಶನದ ಒಳಗೆ ಹಾಗೂ ಹೊರಗೆ ಬಿಜೆಪಿ, ಗ್ಯಾರಂಟಿ ಯೋಜನೆಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದೆ. ವಿಪಕ್ಷ ನಾಯಕನಿಲ್ಲದೆಯೇ ಉಭಯ ಸದನಗಳಲ್ಲಿ ಪ್ರತಿಭಟನೆಗೆ ಮುಂದಾಗಿರುವುದು ಕುತೂಹಲ ಕೆರಳಿಸಿದೆ.
ಇನ್ನೊಂದೆಡೆ ಬಿಜೆಪಿ ಕಚೇರಿಯಲ್ಲಿ ಸಭೆ ಕೂಡ ನಡೆದಿದ್ದು, ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಇನ್ನೂ ಚರ್ಚೆ ಮುಂದುವರೆದಿದೆ. ವೀಕ್ಷಕರಾಗಿ ಆಗಮಿಸಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಹಾಗೂ ವಿನೋದ್ ತಾವ್ಡೆ ಶಾಸಕರ ಅಭಿಪ್ರಾಯ ಪಡೆದು ವಿಪಕ್ಷ ನಾಯಕನ ಆಯ್ಕೆ ಮಾಡಲಿದ್ದಾರೆ. ಯಾರಿಗೆ ವಿಪಕ್ಷ ನಾಯಕನ ಪಟ್ಟ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಈ ನಡುವೆ ವಿಧಾನಸಭೆಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಹಾಗೂ ವಿಧಾನ ಪರಿಷತ್ ನಲ್ಲಿ ಕೋಟಾ ಶ್ರೀನಿವಾಸ್ ನೇತೃತ್ವದಲ್ಲಿ ಧರಣಿಗೆ ನಿರ್ಧರಿಸಲಾಗಿದ್ದು, ಸದನ ಆರಂಭವಾಗುತ್ತಿದ್ದಂತೆಯೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸದಸ್ಯರಿಗೆ ಕರೆ ನೀಡಲಾಗಿದೆ.