ಬೆಂಗಳೂರು; ಕರಾವಳಿ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಬಗ್ಗೆ ಮಾತನಾಡುವ ವಿಪಕ್ಷಗಳು ಕಾನೂನು ಸುವ್ಯವಸ್ಥೆ ವಿಚಾರವಾಗಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರ ಆಡಳಿತದ ಸಂದರ್ಭದಲ್ಲಿ ಹೇಗೆ ನಡೆದುಕೊಂಡಿದ್ದರು ಎಂಬುದನ್ನು ಯೋಚಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ವಿಪಕ್ಷಗಳು ಕಮೆಂಟ್ ಮಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮ ಕಾಲದಲ್ಲಿ ನಡೆದ ಘಟನೆಗಳನ್ನು ಮುಚ್ಚಿಟ್ಟು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಪಿ ಎಫ್ ಐ ಸೇರಿದಂತೆ ಹಲವು ಸಂಘಟನೆಗಳ ವಿರುದ್ಧ ನಾವು ಕೇಸ್ ದಾಖಲಿಸಿದರೆ ಇವರು ಕೇಸ್ ವಜಾಗೊಳಿಸಿದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಶಿವಾಜಿ ನಗರದಲ್ಲಿ ಹಾಡಹಗಲೇ ಕೊಲೆಯಾಗಿತ್ತು. ಆಗ ಸಿದ್ದರಾಮಯ್ಯ ಏನು ಕ್ರಮ ಕೈಗೊಂಡರು? ಆರೋಪಿಗಳಿಗೆ ಬಿರಿಯಾನಿ ತಿನ್ನಲು ಬಿಟ್ಟು ಕೇಸ್ ವಾಪಸ್ ಪಡೆದುಕೊಂಡರು. ಈಗ ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ಇವರಿಗೆ ಏನು ನೈತಿಕತೆ ಇದೆ? ಎಂದು ಪ್ರಶ್ನಿಸಿದರು.