ಕಲಬುರ್ಗಿ: ರಾಜ್ಯ ಸರ್ಕಾರ ಅಸಮರ್ಥ ಎಂಬುದು ಸಾಬೀತಾಗಿದೆ. ಯುವಕರಿಗೆ ಉದ್ಯೋಗ ಬೇಕು ಎಂದರೆ ಲಂಚ ಕೊಡಬೇಕು. ಭ್ರಷ್ಟಾಚಾರ ಸರ್ಕಾರದಲ್ಲಿ ಮಿತಿಮೀರಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ, ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ್ದು ಶೂನ್ಯ ಸಾಧನೆ. ಉದ್ಯೋಗ ಮೇಳ ಮಾಡಿ ಸಾವಿರ ಜನಕ್ಕೂ ಉದ್ಯೋಗ ಕೊಡಲು ಸರ್ಕಾರ ಮುಂದಾಗುತ್ತಿಲ್ಲ. ಯುವಕರಿಗೆ ನೌಕರಿ ಬೇಕು ಎಂದರೆ ಲಂಚಕೊಡಬೇಕು. ಯುವಕರು ಸರ್ಕಾರದ ಮೇಲೆ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
40% ಕೊಟ್ಟರೆ ಎಲ್ಲಾ ಅಕ್ರಮ ನಡೆಸಲು ಸರ್ಕಾರದಲ್ಲಿ ಅವಕಾಶವಿದೆ ಎಂಬುದು ಸಾಬೀತಾಗಿದೆ. ವಿಧಾನಸೌಧವನ್ನು ವ್ಯಾಪಾರ ಸೌಧವನ್ನಾಗಿ ಮಾಡಿದ್ದಾರೆ ಬ್ರೋಕರ್ ಗಳು, 40% ಕೊಟ್ಟರೆ ವಿಧಾನಸೌಧವನ್ನೇ ಮಾರಿ ಬಿಡ್ತಾರೆ. ನೇಮಕಾತಿ ಹಗರಣದ ತನಿಖೆ ಇನ್ನೂ ಮುಗಿದಿಲ್ಲ. ಕೋರ್ಟ್ ಮೂಲಕ ಹಾಲಿ ನ್ಯಾಯಾಧೀಶರಿಂದ ಹಗರಣದ ತನಿಖೆಯಾಗಲಿ ಎಂದು ಆಗ್ರಹಿಸಿದರು.