ಬೆಂಗಳೂರು: ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿರುವ ವಿಪಕ್ಷ ಕಾಂಗ್ರೆಸ್ ವಿಧಾನಸಭೆಯಲ್ಲಿ ವಿನೂತನ ಹೋರಾಟಕ್ಕೆ ಸಜ್ಜಾಗಿ ಆಗಮಿಸಿದೆ. ಅಕ್ಕಿ, ರಾಗಿ, ಬೇಳೆಯೊಂದಿಗೆ ಕಾಂಗ್ರೆಸ್ ನಾಯಕರು ಸದನಕ್ಕೆ ಆಗಮಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಕಮಿಷನ್ ದಂಧೆ ಮಿತಿ ಮೀರಿದೆ. ಸರ್ಕಾರದ ವಿರುದ್ಧ ಇಂದು ಸದನದಲ್ಲಿ ಕಾಂಗ್ರೆಸ್ ನಾಯಕರು ವಿನೂತನವಾಗಿ ಹೋರಾಟ ಮಾಡಲಿದ್ದಾರೆ. ಅದಕ್ಕೆ ಅಕ್ಕಿ, ಬೇಳೆ, ರಾಗಿಯೊಂದಿಗೆ ಬಂದಿದ್ದೇವೆ ಎಂದರು.
ಎಲ್ಲಾ ಇಲಾಖೆಯಲ್ಲೂ ಕಮಿಷನ್ ನಡೆಯುತ್ತಿದೆ. ಜನರನ್ನು ಲೂಟಿ ಮಾಡುತ್ತಿದ್ದಾರೆ. ನಮ್ಮ ಬಳಿ ಕಮಿಷನ್ ನೀಡಲು ಆಗಲ್ಲ. ಹಾಗಾಗಿ ಕಮಿಷನ್ ಬದಲಾಗಿ ಅಕ್ಕಿ, ಬೇಳೆ, ರಾಗಿ ಪ್ಯಾಕೇಟ್ ಕೊಡುತ್ತೇವೆ ಎಂದು ಕಿಡಿಕಾರಿದರು.
ಕಮಿಷನ್ ದಂಧೆ ಬಗ್ಗೆ ತನಿಖೆ ನಡೆಸಲಿ ಎಂದು ಒತ್ತಾಯಿಸಿದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಆಗಿತ್ತು ಎಂದು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಬಿಜೆಪಿಯವರು ಏನು ಮಾಡುತ್ತಿದ್ದರು ? 40%ಕಮಿಷನ್ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ ಎಂದು ಆಗ್ರಹಿಸಿದರು.