ಬೆಂಗಳೂರು: ಜೈನಮುನಿ ಹತ್ಯೆ ಪ್ರಕರಣ ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ್ದು, ಬಿಜೆಪಿ ಸದಸ್ಯರು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಜೈನಮುನಿ ಹತ್ಯೆ ಪ್ರಕರಣ ಖಂಡನೀಯ ಇಂತಹ ಘಟನೆ ಮತ್ತೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಉಗ್ರರ ಕೃತ್ಯದ ರೀತಿ ಹತ್ಯೆ ಮಾಡಿರುವುದು ಅಮಾನುಷ ಕೃತ್ಯ. ಸೂಕ್ತ ತನಿಖೆ ನಡೆಸುವ ಮೊದಲೇ ಈಗಾಗಲೇ ತನಿಖೆಯಾದಂತೆ ಅಧಿಕಾರಿಗಳು ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ದ್ವನಿಗೂಡಿಸಿದ ಶಾಸಕ ಅಭಯ್ ಪಾಟೀಲ್, ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಹತ್ಯೆ ಪ್ರಕರಣದ ಬಗ್ಗೆ ಹಲವು ಅನುಮಾನಗಳಿವೆ. ತನಿಖಾಧಿಕಾರಿಗಳ ಮೇಲೆ ಒತ್ತಡವಿದ್ದಂತಿದೆ. ಆರೋಪಿಗಳ ಹೆಸರನ್ನು ಸರಿಯಾಗಿ ಹೇಳುತ್ತಿಲ್ಲ. ಹಣದ ವ್ಯವಹಾರದ ಬಗ್ಗೆಯೂ ತನಿಖೆಯಾಗಲಿ. ಸಿಬಿಐ ತನಿಖೆಗೆ ಪ್ರಕರಣ ವಹಿಸಿದರೆ ಸತ್ಯಾಂಶ ಹೊರಬರಲಿದೆ ಎಂದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ, ಜೈನಮುನಿ ಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ನಿಸ್ಪಕ್ಷಪಾತವಾಗಿ ನಡೆಸಬೇಕು. ವಿಪಕ್ಷಗಳು ತನಿಖೆ ಹಂತದಲ್ಲಿ ದಿಕ್ಕುತಪ್ಪಿಸುವ ಕೆಲಸ ಮಾಡಬಾರದು. ಜೈನಮುನಿ ಹತ್ಯೆ ಕೇಸ್ ನಲ್ಲಿ ರಾಜಕಾರಣ ಬೆರೆಸುವುದು ಬೇಡ ಎಂದರು.