ಬೆಂಗಳೂರು: ವಿಧಾನಮಂಡಲದ ಕೊನೇ ದಿನದ ಅಧಿವೇಶನ ಆಡಳಿತ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರ ವಾಗ್ವಾದ ಕೋಲಾಹಲಕ್ಕೆ ಕಾರಣವಾಗಿದ್ದು, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ವಿಧಾನಸಭೆ ಕಲಾಪದ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಪ್ರತಿಭಟನೆ ಆರಂಭಿಸಿದರು. ಸದನದ ಬಾವಿಗಿಳಿದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. NEP-ನ್ಯಾಷನಲ್ ಎಜುಕೇಶನ್ ಪಾಲಿಸಿ ಎಂಬುದು ನಾಗ್ಪುರ ಎಜುಕೇಶನ್ ಪಾಲಿಸಿಯಾಗಿದೆ. ಬಿಜೆಪಿ ಸ್ವಾರ್ಥಕ್ಕಾಗಿ ಈ ಶಿಕ್ಷಣ ನೀತಿ ಜಾರಿಗೊಳಿಸಲು ಮುಂದಾಗಿದೆ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು. ಇದಕ್ಕೆ ಕಾಂಗ್ರೆಸ್ ನ ಉಳಿದ ಸದಸ್ಯರು ಧ್ವನಿಗೂಡಿಸಿದರು.
ದೀದಿ ನಿವಾಸದ ಬಳಿ ಮೃತದೇಹದೊಂದಿಗೆ ಪ್ರೊಟೆಸ್ಟ್: ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ವಿರುದ್ದ ಕೇಸ್
ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ಭಾರತೀಯರಿಗಾಗಿ ಮಾಡಿರುವ ಶಿಕ್ಷಣ ನೀತಿಯಿದು. ಕಾಂಗ್ರೆಸ್ ನವರದ್ದು ಗುಲಾಮಗಿರಿ ಎಜುಕೇಷನ್ ಪಾಲಿಸಿ ಎಂದು ತಿರುಗೇಟು ನೀಡಿದರು. ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ನವರದ್ದು ಇಟಲಿ ಪಾಲಿಸಿ ಎಂದು ಗುಡುಗಿದರು. ಇದರಿಂದ ಕೆಂಡಾಮಂಡಲರಾದ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು. ಬಿಜೆಪಿಯವರದ್ದು ಚಾಣಕ್ಯ ವಿವಿ, ನಾಗ್ಪುರ ಎಜುಕೇಷನ್ ಪಾಲಿಸಿ.. ಬಿಜೆಪಿ ನಾಯಕರು ಆರ್ ಎಸ್ ಎಸ್ ವಿಶ್ವವಿದ್ಯಾಲಯ ಮಾಡಲು ಹೊರಟಿದ್ದಾರೆ. ಆರ್ ಎಸ್ ಎಸ್ ಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಮಾತು ಮುಂದುವರೆಸಿದ ಸಿಎಂ ಬೊಮ್ಮಾಯಿ, ನಮ್ಮದು ದೇಶದ ಸ್ವಾಭಿಮಾನದ ಎಜುಕೇಷನ್ ನೀತಿ. ದೇಶದ ಮಕ್ಕಳ ಭವಿಷ್ಯಕ್ಕಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ಸಮರ್ಥಿಸಿಕೊಂಡರು.
ನಂತರ ಸಚಿವ ಡಾ.ಸುಧಾಕರ್ ಕೋವಿಡ್ ನಿರ್ವಹಣೆ ಕುರಿತು ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಲು ಮುಂದಾದಾಗಲೂ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲ ಮುಂದುವರೆದ ಹಿನ್ನೆಲೆಯಲ್ಲಿ ಕಲಾಪವನ್ನು ಸ್ಪೀಕರ್ ಕಾಗೇರಿ ಅನಿರ್ದಿಷ್ಟಾವಧಿಗೆ ಮುಂದೂಡಿದರು.