ಬೆಂಗಳೂರು: ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ವಿಧಾನಸಭೆಗೆ ಆಗಮಿಸಲು ಮುಂದಾದ ಜೆಡಿಎಸ್ ಶಾಸಕರಿಗೆ ತಡೆಯೊಡ್ಡಲಾಗಿದ್ದು, ಕಪ್ಪುಪಟ್ಟಿ ಧರಿಸಿ ಸದನ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಮಾರ್ಷಲ್ ಗಳು ತಿಳಿಸಿದ ಘಟನೆ ನಡೆದಿದೆ.
ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಜೆಡಿಎಸ್ ಶಾಸಕರು ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಬಳಿಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಿ.ಎಂ. ಇಬ್ರಾಹಿಂ, ಶರವಣ ಸೇರಿದಂತೆ ಹಲವು ಶಾಸಕರು ಕಪ್ಪುಪಟ್ಟಿ ಧರಿಸಿ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದರು.
ಕಪ್ಪುಪಟ್ಟಿ ಧರಿಸಿ ಬಂಧ ಜೆಡಿಎಸ್ ಶಾಸಕರನ್ನು ವಿಧಾನಸಭೆ ಪ್ರವೇಶ ದ್ವಾರದಲ್ಲೇ ತಡೆದ ಮಾರ್ಷಲ್ ಗಳು, ಸದನಕ್ಕೆ ಕಪ್ಪುಪಟ್ಟಿ ಧರಿಸಿ ಬರಲು ಅವಕಾಶವಿಲ್ಲ ಎಂದರು.
ಬಳಿಕ ಶಾಸಕರು ಕಪ್ಪು್ಪಟ್ಟಿ ತೆಗೆದು ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ವೇಳೆ ಹೆಚ್.ಡಿ.ಕುಮಾರಸ್ವಾಮಿ ಜತೆ ಬಂದ ಕೆಲ ಜೆಡಿಎಸ್ ಶಾಸಕರು ಕಪ್ಪು ಬಾವುಟ ಹಿಡಿದು ಆಗಮಿಸುತ್ತಿದ್ದಂತೆ ಮಾರ್ಷಲ್ ಗಳು ಗಲಿಬಿಲಿಗೊಂಡರು. ನಾವು ನಿಯಮ ಉಲ್ಲಂಘನೆ ಮಾಡುವುದಿಲ್ಲ, ಸದನದ ಒಳಹೋಗಲು ಬಿಡುವಂತೆ ಹೆಚ್.ಡಿ.ಕೆ. ಮನವರಿಕೆ ಮಾಡಿದ ಪ್ರಸಂಗವೂ ನಡೆಯಿತು.