ಮುಂಬರುವ ವಿಧಾನಸಭಾ ಚುನಾವಣೆಗೆ ಪಂಚರತ್ನ ಯಾತ್ರೆ ಮೂಲಕ ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಲಾಗಿದೆ. ಇದರ ಮಧ್ಯೆ 90 ಕ್ಕೂ ಅಧಿಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ರಣಕಹಳೆ ಮೊಳಗಿಸಿದೆ.
ಆದರೆ ಈಗ ಬಿಡುಗಡೆಗೊಂಡಿರುವ ಪಟ್ಟಿಯಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರ ಹೆಸರು ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿತ್ತು. ಇದೀಗ ತಮ್ಮ ಸ್ಪರ್ಧೆ ಕುರಿತಂತೆ ರೇವಣ್ಣನವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವರು ರೇವಣ್ಣ ಹಾಸನದಲ್ಲಿ ನಿಂತರೆ 50,000 ಮತಗಳಿಂದ ಸೋಲಿಸುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರ ಸವಾಲು ಸ್ವೀಕರಿಸಬೇಕಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ತಾವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನದಿಂದ ಕಣಕ್ಕಿಳಿಯಬೇಕೋ ಅಥವಾ ಹೊಳೆ ನರಸೀಪುರದಿಂದ ಸ್ಪರ್ಧಿಸಬೇಕೋ ಎಂಬುದರ ಕುರಿತು ಜನವರಿ 15ರ (ಧನುರ್ಮಾಸ ಕಳೆದ ಬಳಿಕ) ನಂತರ ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ.